ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹಾವಂಜೆ ಗ್ರಾಮದ ಕೀಳಿಂಜೆ ಪ್ರದೇಶದಲ್ಲಿರುವ ಅರಣ್ಯ ವಿಸ್ತರಣಾ ಬ್ಲಾಕ್‌ನಲ್ಲಿ ಸುಮಾರು 300 ಎಕರೆ ಅಕೇಶಿಯ ಮರಗಳ ತೋಟ ಹಾಗೂ ಗೋಳಿಕಟ್ಟೆ ಸಮೀಪದ ಶೇಡಿಗುಳಿ ಪ್ರದೇಶದಲ್ಲಿರುವ ಸುಮಾರು 200 ಎಕರೆ ಅರಣ್ಯ ವಿಸ್ತರಣಾ ಭೂ ಪ್ರದೇಶವನ್ನು ಲಘು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪರಿಗಣಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಪ್ರದೇಶವು ಭೌಗೋಳಿಕವಾಗಿ ಎತ್ತರ ಪ್ರದೇಶದಲ್ಲಿದ್ದು, ಲಘು ವಿಮಾನಗಳ ಹಾರಾಟಕ್ಕೆ ಸೂಕ್ತವಾಗಿರಬಹುದು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಹತ್ತಿರದಲ್ಲೇ ಸ್ವರ್ಣ ನದಿ, ಕುಡಿಯುವ ನೀರಿಗಾಗಿ ನಿರ್ಮಿಸಲಾದ ಡ್ಯಾಂ, ರಿಂಗ್‌ರೋಡ್, ಜಿಲ್ಲಾಧಿಕಾರಿ ಕಚೇರಿಗೆ ಸಂಪರ್ಕ ಕಲ್ಪಿಸುವ ಶಿಮ್ರಾ ಪರಾರಿ ಸೇತುವೆ ಸೇರಿದಂತೆ ಉತ್ತಮ ರಸ್ತೆ ಸಂಪರ್ಕ ವ್ಯವಸ್ಥೆ ಇದೆ. ಜೊತೆಗೆ ಸಂತೆಕಟ್ಟೆ-ಪೆರ್ಡೂರು ರಾಜ್ಯ ಹೆದ್ದಾರಿ ಸಂಪರ್ಕವೂ ಈ ಪ್ರದೇಶಕ್ಕೆ ಲಭ್ಯವಿದೆ.
ಉಡುಪಿ, ಕಾಪು, ಕಾರ್ಕಳ, ಹೆಬ್ರಿ, ಕುಂದಾಪುರ ಹಾಗೂ ಬೈಂದೂರು ತಾಲೂಕುಗಳಿಗೆ ಮಧ್ಯಭಾಗವಾಗಿರುವ ಬ್ರಹ್ಮಾವರ ಕ್ಷೇತ್ರದಲ್ಲಿ ಲಘು ವಿಮಾನ ನಿಲ್ದಾಣ ನಿರ್ಮಾಣವಾದರೆ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಅಗತ್ಯವಿದ್ದಲ್ಲಿ ರನ್‌ವೇ ನಿರ್ಮಾಣಕ್ಕಾಗಿ ಖಾಸಗಿ ಜಮೀನನ್ನೂ ಖರೀದಿಸಬಹುದಾಗಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಈ ಕುರಿತು ಎರಡು ತಿಂಗಳ ಹಿಂದೆ ಉಡುಪಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿತ್ತು. ಅದರ ಹಿನ್ನೆಲೆ ಹಾವಂಜೆ ಗ್ರಾಮದ ಗ್ರಾಮ ಆಡಳಿತ ಅಧಿಕಾರಿ ಶ್ರೀ ಪ್ರಮೋದ್ ಹಾಗೂ ಗ್ರಾಮ ಸಹಾಯಕ ರವಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಸ್ಥಳೀಯರಾದ ಕಾಂಗ್ರೆಸ್ ಮುಖಂಡ ಜಯಶೆಟ್ಟಿ ಬನ್ನಂಜೆ, ಪರಿಸರ ಪ್ರೇಮಿ ಪೌಲ್ ಡಿ ಅಲ್ಮೇಡಾ ಕೀಳಿಂಜೆ, ಆಮಿಲ್ದಾ ಡಿಸೋಜಾ ಕೀಳಿಂಜೆ, ರತ್ನಾಕರ ಮೊಗವೀರ ಹಾವಂಜೆ, ಸಾಮಾಜಿಕ ಕಾರ್ಯಕರ್ತ ಗಣೇಶ್ ಸರಳಬೆಟ್ಟು, ಪ್ರಕಾಶ್ ಭಂಡಾರಿ ಕೊಳಲಗಿರಿ ಮೊದಲಾದವರು ಉಪಸ್ಥಿತರಿದ್ದರು.

ಒಟ್ಟಿನಲ್ಲಿ ಹಾವಂಜೆ-ಕೀಳಿಂಜೆ ಪ್ರದೇಶದಲ್ಲಿ ಲಘು ವಿಮಾನ ಹಾರಾಟ ವ್ಯವಸ್ಥೆ ಆರಂಭವಾದರೆ ಉಡುಪಿ ಜಿಲ್ಲೆಯ ಪ್ರವಾಸೋದ್ಯಮ, ವ್ಯಾಪಾರ ಹಾಗೂ ಸಾರಿಗೆ ಕ್ಷೇತ್ರಗಳಿಗೆ ಹೆಚ್ಚಿನ ಉತ್ತೇಜನ ದೊರೆಯಲಿದೆ ಎಂದು ಸ್ಥಳೀಯರು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.







