ಕೊಲ್ಲೂರು: ಬೈಂದೂರು ತಾಲೂಕಿನ ಕೊಲ್ಲೂರು ಗ್ರಾಮದ ದಳಿ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 766Cರಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು, ಮಕ್ಕಳೂ ಸೇರಿದಂತೆ ಎಂಟು ಮಂದಿ ಗಾಯಗೊಂಡ ಘಟನೆ ನಡೆದಿದೆ.
ದಿನಾಂಕ 17/05/2026 ರಂದು ಮಧ್ಯಾಹ್ನ ಸುಮಾರು 1:30 ಗಂಟೆಗೆ ಇನ್ಸುಲೇಟರ್ ಲಾರಿಯ ಚಾಲಕನು ಕೊಲ್ಲೂರು ಕಡೆಯಿಂದ ನಿಟ್ಟೂರು ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ, ಮುಂದೆ ಸಾಗುತ್ತಿದ್ದ ವಾಹನವನ್ನು ಓವರ್‌ಟೇಕ್ ಮಾಡುವ ಭರದಲ್ಲಿ ರಸ್ತೆಯ ಬಲಭಾಗಕ್ಕೆ ನುಗ್ಗಿದ್ದಾನೆ ಎನ್ನಲಾಗಿದೆ. ಈ ವೇಳೆ ಕೊಡಚಾದ್ರಿ (ನಿಟ್ಟೂರು) ಕಡೆಯಿಂದ ಕೊಲ್ಲೂರು ಕಡೆಗೆ ಬರುತ್ತಿದ್ದ ಜೀಪಿಗೆ ಎದುರುಗಡೆಯಿಂದ ಡಿಕ್ಕಿ ಹೊಡೆದಿದೆ.
ಅಪಘಾತದ ಪರಿಣಾಮ ಜೀಪಿನಲ್ಲಿ ಪ್ರಯಾಣಿಸುತ್ತಿದ್ದ ಜ್ಯೋತಿ (46) ಹಾಗೂ ಆರಿಯಾ (28) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜೀಪಿನ ಚಾಲಕ ದೇವರಾಜ್ ಸೇರಿದಂತೆ ಜ್ಯೋತಿಸ್, ಅಬೆ, ಅನೂಪ್ ಹಾಗೂ ಮಕ್ಕಳಾದ ಆಯಾನ್ (5), ಅವಿನಿ (8), ಅರ್ಜುನ್ (9) ಗಾಯಗೊಂಡಿದ್ದಾರೆ.
ಗಾಯಾಳುಗಳಾದ ಮಿನಿ ಹಾಗೂ ಜ್ಯೋತಿಸ್ ಅವರು ಕುಂದಾಪುರದ ಆದರ್ಶ ಆಸ್ಪತ್ರೆಗೆ ದಾಖಲಾಗಿ ಪ್ರಥಮ ಚಿಕಿತ್ಸೆ ಪಡೆದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ರವಾನೆಯಾಗಿದ್ದಾರೆ. ಉಳಿದ ಗಾಯಾಳುಗಳು ಕುಂದಾಪುರ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಂಬಂಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.







