ಮಣಿಪಾಲ್, ಭಾರತ ಮತ್ತು ನ್ಯೂಯಾರ್ಕ್, ಏಪ್ರಿಲ್ 13, 2026: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯು ಅಮೆರಿಕ ಮೂಲದ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಕಂಪನಿ ‘ಹೆಲೋಜನ್ ಕಾರ್ಪೊರೇಷನ್’ ಜತೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ.
ಬಾಹ್ಯಾಕಾಶ ಆಧಾರಿತ ಜೀವವೈದ್ಯಕೀಯ ಸಂಶೋಧನೆಗಾಗಿ ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಮಾಹೆ ಮತ್ತು ಹೆಲೋಜನ್ ಕಾರ್ಪೊರೇಷನ್ ಜಂಟಿಯಾಗಿ ಸುಧಾರಿತ ಬಯೋಮಟಿರಿಯಲ್ ಕುರಿತು ಸಂಶೋಧನೆ ನಡೆಸಲು, ಮಿಷನ್ ಸಿದ್ಧಪಡಿಸಲು ಮತ್ತು ಹೊಸ ಪ್ರಯೋಗಗಳನ್ನು ಕೈಗೊಳ್ಳಲು ಈ ಪಾಲುದಾರಿಕೆ ಸಹಕಾರಿಯಾಗಲಿದೆ.
ಹಂತ ಹಂತವಾಗಿ ಈ ಸಂಶೋದನೆ ನಡೆಯಲಿದ್ದು, ಭೂಮಿ ಮತ್ತು ಬಾಹ್ಯಾಕಾಶದಲ್ಲಿ ಬಳಸಬಹುದಾದ ಸ್ನಾಯು ಮಾದರಿಗಳನ್ನು ಒಳಗೊಂಡಂತೆ ಜೀವಕೋಶಗಳ ಮಾದರಿ ಅಭಿವೃದ್ಧಿ ಮತ್ತು ಮೂಳೆ ಸವೆತದ ಅಧ್ಯಯನದ ಬಗ್ಗೆ ಈ ಸಹಯೋಗವು ಗಮನ ಹರಿಸಲಿದೆ. ಈ ಒಪ್ಪಂದದ ಅಡಿಯಲ್ಲಿ, ಮಾಹೆಯು ಬಾಹ್ಯಾಕಾಶ ಜೀವಶಾಸ್ತ್ರದ ಸಂಶೋಧನೆಯ ನೇತೃತ್ವ ವಹಿಸಲಿದೆ. ಭಾರತದ ಬಾಹ್ಯಾಕಾಶ ಯೋಜನೆಗಳಿಗೆ ಪೂರಕವಾದ ಹೊಸ ಪ್ರಯೋಗಗಳನ್ನು ಸಿದ್ಧಪಡಿಸುವ ಗುರಿ ಹೊಂದಿದೆ. ಈ ಒಪ್ಪಂದ ಮೂಲಕ ನಡೆಯುವ ಸಂಶೋಧನೆಗಳು ಭಾರತದ ಹೊಸ ಬಾಹ್ಯಾಕಾಶ ನಿಲ್ದಾಣ ಯೋಜನೆಗಳಿಗೆ ಪೂರಕವಾಗಿರಲಿದೆ. ಮುಖ್ಯವಾಗಿ, ಭವಿಷ್ಯದಲ್ಲಿ ಸ್ಥಾಪನೆಯಾಗಲಿರುವ ‘ಭಾರತೀಯ ಅಂತರಿಕ್ಷ ನಿಲ್ದಾಣ’ದ ಮೂಲಕ ಶೂನ್ಯ ಗುರುತ್ವಾಕರ್ಷಣೆಯಲ್ಲಿ ದೀರ್ಘಕಾಲದವರೆಗೆ ಮತ್ತು ಶಾಶ್ವತವಾಗಿ ಸಂಶೋಧನೆಗಳನ್ನು ನಡೆಸಲು ಇದು ಸಹಾಯ ಮಾಡಲಿದೆ.
ಸಹಯೋಗದ ಪ್ರಮುಖಾಂಶಗಳು:
ಸುಧಾರಿತ ಸಂಶೋಧನಾ ತಂತ್ರಜ್ಞಾನ: ಮಾಹೆ ತನ್ನದೇ ಆದ ‘ಆರ್ಗನಾಯ್ಡ್’ (ಅಂಗಾಂಶ ಮಾದರಿ) ಸಂಶೋಧನೆ ಯನ್ನು ಹೆಲೋಜನ್ ಸಂಸ್ಥೆಯ ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಸಂಯೋಜಿಸಲಿದೆ. ಇದು ಬಾಹ್ಯಾಕಾಶದಲ್ಲಿ ಬಯೋಮಟಿರಿಯಲ್ ಅಭಿವೃದ್ಧಿ, ಅವುಗಳ ವೈಜ್ಞಾನಿಕ ಅಧ್ಯಯನಕ್ಕೆ ನೆರವಾಗಲಿದೆ.
ವೈಜ್ಞಾನಿಕ ನಾಯಕತ್ವ: ಮಾಹೆಯ ಮಣಿಪಾಲ್ ಸ್ಕೂಲ್ ಆಫ್ ಲೈಫ್ ಸೈನ್ಸಸ್‌ನ ಸಹ ಪ್ರಾಧ್ಯಾಪಕರಾದ ಡಾ. ಮಾನಶ್ ಕೆ. ಪಾಲ್ ಅವರು ಈ ಕಾರ್ಯಕ್ರಮದ ಮುಖ್ಯ ಸಂಶೋಧಕರಾಗಿ ಒಟ್ಟಾರೆ ವೈಜ್ಞಾನಿಕ ನಾಯಕತ್ವ ಮತ್ತು ಮಾರ್ಗದರ್ಶನ ನೀಡಲಿದ್ದಾರೆ. ಇವರು ಮಾಹೆಯ ಸೆಂಟರ್ ಫಾರ್ ಆರ್ಗನಾಯ್ಡ್ ಬಯೋ ಇಂಜಿನಿಯರಿಂಗ್, ಬಯೋಪ್ರಿಂಟಿಂಗ್, ಬಯೋಬ್ಯಾಂಕಿಂಗ್ ಮತ್ತು ಬಯೋಮೆಡಿಕಲ್ ಸೈನ್ಸಸ್‌ನ ಸಂಯೋಜಕರೂ ಆಗಿದ್ದಾರೆ. ಕಸ್ತೂರಬಾ ಮೆಡಿಕಲ್ ಕಾಲೇಜ್‌ನ ವೈದ್ಯಕೀಯ ತಜ್ಞರ ತಂಡ ಮತ್ತು ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ತಜ್ಞರ ತಂಡ ಇವರಿಗೆ ಬೆಂಬಲ ನೀಡಲಿದೆ.
ಸಂಪೂರ್ಣ ಮಿಷನ್ ಬೆಂಬಲ: ಈ ಸಹಯೋಗವು ಮಾಹೆಯ ವಿವಿಧ ಕ್ಷೇತ್ರಗಳ ಸಂಶೋಧನಾ ಪರಿಣತಿಯನ್ನು ಮತ್ತು ಹೆಲೋಜನ್ ಸಂಸ್ಥೆಯ ಸಂಪೂರ್ಣ ಬಾಹ್ಯಾಕಾಶ ಮಿಷನ್ ಸೇವೆಗಳನ್ನು ಒಂದಾಗಿಸುತ್ತದೆ.
ʼಜೀವವೈದ್ಯಕೀಯ ವಿಜ್ಞಾನ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಸಂದಿಸುವ ಕ್ಷೇತ್ರದಲ್ಲಿ, ಭವಿಷ್ಯಕ್ಕೆ ಪೂರಕವಾದ ಸಂಶೋಧನೆಗಳನ್ನು ಉತ್ತೇಜಿಸಲು ಮಾಹೆ ಸದಾ ಸಿದ್ಧವಾಗಿದೆ ಎಂಬುದನ್ನು ಈ ಸಹಯೋಗವು ಸಾಬೀತುಪಡಿಸುತ್ತದೆ. ಶೈಕ್ಷಣಿಕ ಜ್ಞಾನ ಮತ್ತು ವೈದ್ಯಕೀಯ ಅನುಭವವನ್ನು ಬಾಹ್ಯಾಕಾಶ ತಂತ್ರಜ್ಞಾನದೊಂದಿಗೆ ಬಳಸಿಕೊಳ್ಳುವ ಮೂಲಕ, ವಿಜ್ಞಾನದ ದೃಷ್ಟಿಯಿಂದ ನಿಖರವಾದ ಹಾಗೂ ಸಮಾಜಕ್ಕೆ ಉಪಯುಕ್ತವಾದ ಹೊಸ ಮಾಹಿತಿಯನ್ನು ಪಡೆಯುವುದು ನಮ್ಮ ಗುರಿಯಾಗಿದೆʼ ಎಂದು ಮಾಹೆ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ. ಡಿ. ವೆಂಕಟೇಶ್ ತಿಳಿಸಿದರು.
‘ಮುಂದಿನ ತಲೆಮಾರಿನ ಜೀವವೈದ್ಯಕೀಯ ಸಂಶೋಧನೆಯಲ್ಲಿ ಮಹತ್ತರ ಸಾಧನೆ ಮಾಡಲು ಬಾಹ್ಯಾಕಾಶದ ‘ಶೂನ್ಯ ಗುರುತ್ವಾಕರ್ಷಣೆ’ ಬಳಸಿಕೊಳ್ಳುವ ನಿಟ್ಟಿನಲ್ಲಿ ಈ ಒಪ್ಪಂದವು ಒಂದು ಪ್ರಮುಖ ಹೆಜ್ಜೆಯಾಗಿದೆ. ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಪ್ರಯೋಗ ನಡೆಸಿದ ಅನುಭವವಿರುವ ಮಾಹೆಯ ಪರಿಣಿತ ತಂಡದೊಂದಿಗೆ ಕೆಲಸ ಮಾಡುತ್ತಿರುವುದು ನಮಗೆ ಸಂತಸ ತಂದಿದೆ. ಇದು ಭಾರತದ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಅತ್ಯಂತ ಪ್ರಮುಖವಾದ ಸಹಯೋಗಗಳಲ್ಲಿ ಒಂದಾಗಲಿದೆ’ ಎಂದು ಹೆಲೋಜನ್ ಕಾರ್ಪೊರೇಶನ್‌ನ ಸಿಇಒ ಶಿಶಿರ್ ಬಂಕಾಪುರ ಅಭಿಪ್ರಾಯಪಟ್ಟರು.
‘ಹೆಲೋಜನ್ ಜತೆಗಿನ ಒಪ್ಪಂದದಿಂದ ನಮ್ಮ ಸಂಶೋಧಕರಿಗೆ ಬಾಹ್ಯಾಕಾಶ ಆಧಾರಿತ ವಿಶಿಷ್ಟ ತಂತ್ರಜ್ಞಾನಗಳನ್ನು ಬಳಸುವ ಅವಕಾಶ ಸಿಗಲಿದೆ. ಸಂಶೋಧನೆ ಕ್ಷೇತ್ರದಲ್ಲಿ ಮಾಹೆ ಸಂಸ್ಥೆಗೆ ಇದೊಂದುಸ ಹೊಸ ಗರಿ ಮೂಡಿಸಲಿದೆʼ ಎಂದು ಮಣಿಪಾಲ್ ಸ್ಕೂಲ್ ಆಫ್ ಲೈಫ್ ಸೈನ್ಸಸ್‌ನ ಸಹ ಪ್ರಾಧ್ಯಾಪಕ ಡಾ. ಮಾನಶ್ ಕೆ. ಪಾಲ್ ತಿಳಿಸಿದರು.







