ಕಾರ್ಕಳ:ಮಾರ್ಚ್ 30:ಜಿಎಸ್‌ಬಿ ಸಮಾಜ ಹಿತ ರಕ್ಷಣಾ ವೇದಿಕೆ ಸಮಾಜದ ಹಿರಿಯರಿಗಾಗಿ ನಿರ್ಮಿಸುತ್ತಿರುವ ವಯೋವಂದನ ಆತಿಥ್ಯ ಗೃಹ ಮಕ್ಕಳಿಲ್ಲದ ಹಿರಿಯರಿಗೆ ಜೀವನದ ಸಂಧ್ಯಾಕಾಲದಲ್ಲಿ ಆಸರೆಯಾಗಿ ಚೈತನ್ಯದಾಯಿಯಾಗಲಿದೆ.
ವೇದಿಕೆಯ ಸಮಾಜ ಸಂಘಟನೆ ಮತ್ತು ಸಮಾಜಮುಖಿ ಕಾರ್ಯಗಳಿಗೆ ಸಮಾಜದ ಎಲ್ಲರೂ ಒಮ್ಮನಿಸ್ಸಿನಿಂದ ಕೈಜೋಡಿಸಿದರೆ ಈ ಮಹತ್ವಕಾಂಕ್ಷಿ ಯೋಜನೆ ಆದಷ್ಟು ಶೀಘ್ರ ನೆರವೇರಲಿದೆ ಎಂದು ಶುಭ ಹಾರೈಸಿದರು.
ಅವರು ಮಂಗಳೂರು ರಥ ಬೀದಿಯಲ್ಲಿರುವ ಶ್ರೀ ಕುಡ್ತೇರಿ ಮಹಾಮಾಯ ದೇವಸ್ಥಾನದ ಸಭಾಗ್ರಹದಲ್ಲಿ ಮಾರ್ಚ್ 28 ಶನಿವಾರದಂದು ಸಂಜೆ ಜರುಗಿದ
” ವಯೋವಂದನ ಆತಿಥ್ಯ ಗೃಹ”ದ ಸಮಾಲೋಚನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.
ಉಡುಪಿ ತ್ರಿಶಾ ವಿದ್ಯಾ ಕಾಲೇಜಿನ ಸಂಸ್ಥಾಪಕರಾದ ಸಿಎ ಗೋಪಾಲಕೃಷ್ಣ ಭಟ್ ರವರು ಯೋಜನೆಯ ಸಮಗ್ರ ವಿವರಗಳನ್ನು ಅಂಕಿ ಅಂಶಗಳ ಮೂಲಕ ವಿವರಿಸಿ, ನಿವಾಸಿಗಳಿಗೆ ಊಟೋಪಚಾರ, ವಸತಿ ವ್ಯವಸ್ಥೆ, ವೈದ್ಯಕೀಯ ಸೌಲಭ್ಯದ ಜೊತೆಗೆ ಜೀವನೋತ್ಸಾಹವನ್ನು ಹೆಚ್ಚಿಸುವ ನಿರಂತರ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಉದ್ಭವ ಡಿಸೈನ್ ಸ್ಟುಡಿಯೋ ಮಣಿಪಾಲದ ಸಿವಿಲ್ ಇಂಜಿನಿಯರ್ ಕುಂದಾಪುರದ ಶ್ರೀ ಸಚಿತ್ ಪೈ ಯವರು ವಾಸ್ತು ವಿನ್ಯಾಸ ಮತ್ತು ಕಟ್ಟಡ ನಿರ್ಮಾಣ ಸಲಹೆಗಾರರಾಗಿದ್ದು, ಪ್ರತಿ ಮಹಡಿಯಲ್ಲಿ 24 ಕೊಠಡಿ ಗಳಂತೆ ಒಟ್ಟು 72 ಕೊಠಡಿಗಳ 144 ಮಂದಿ ಹಿರಿಯರಿಗೆ ವಾಸಿಸಲು ಅನುಕೂಲವಾಗುವ 56 ಸಾವಿರ ಚದರಡಿಯ ಕಟ್ಟಡದ ವಾಸ್ತು ವಿನ್ಯಾಸ ಮತ್ತು ಸೌಲಭ್ಯಗಳ ವಿವರವನ್ನು ಸಭೆಗೆ ನೀಡಿದರು.
ಪ್ರಸ್ತಾವಿಕವಾಗಿ ಮಾತನಾಡಿದ ಜಿ ಎಸ್ ಬಿ ಸಮಾಜ ಹಿತ ರಕ್ಷಣಾ ವೇದಿಕೆಯ ಸಂಚಾಲಕರು ಹಾಗೂ ವಯೋವಂದನ ಆತಿಥ್ಯ ಗ್ರಹ ಯೋಜನೆಯ ರೂವಾರಿಗಳಾದ ಶ್ರೀ ಆರ್ ವಿವೇಕಾನಂದ ಶೆಣೈಯವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಕಳೆದ 14 ವರ್ಷಗಳಿಂದ ಕುಟುಂಬ ಚೈತನ್ಯ ನಿಧಿ, ವಿದ್ಯಾ ಪೋಷಕ ನಿಧಿ, ಪ್ರತಿಭಾ ಪುರಸ್ಕಾರ, ಆರೋಗ್ಯ ಚೈತನ್ಯ ನಿಧಿ, ಜಿಎಸ್‌ಬಿ ಗ್ರಹ ನಿರ್ಮಾಣ ಯೋಜನೆ, ಉಚಿತ ಗುಂಪು ಆರೋಗ್ಯ ವಿಮಾ ಯೋಜನೆಯ ಮೂಲಕ ಉಡುಪಿ ಜಿಲ್ಲೆಯಿಂದ ಪ್ರಾರಂಭಿಸಿ ದಕ್ಷಿಣ ಕನ್ನಡ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದರು.


*” ವಯೋವಂದನ ಆತಿಥ್ಯ ಗೃಹ ಯೋಜನೆ* “ಯು ವೇದಿಕೆಯ ಮಹತ್ವಕಾಂಕ್ಷಿ ಯೋಜನೆ ಯಾಗಿದ್ದು, ಪ್ರಮುಖವಾಗಿ ಸಮಾಜದ ಮಕ್ಕಳಿಲ್ಲದ ಹಿರಿಯರಿಗೆ ಉಚಿತ ವಾಸ್ತವ್ಯ ಕಲ್ಪಿಸುವ ಸದುದ್ದೇಶದಿಂದ ಯೋಜನೆಯನ್ನು ಪ್ರಾರಂಭಿಸಲಾಗಿದ್ದು, ಮಕ್ಕಳು ವಿದೇಶದಲ್ಲಿದ್ದು ಒಂಟಿತನ ಕಾಡುವ ದಂಪತಿಗಳಿಗೆ ಕೂಡಾ ನಿಗದಿತ ಶುಲ್ಕದೊಂದಿಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿದ್ಯಾ ಪೋಷಕ ನಿಧಿ ವಿದ್ಯಾರ್ಥಿ ವೇತನದ ಅಧ್ಯಕ್ಷರಾದ ಶ್ರೀ ಸಿಎ ಎಸ್ ಎಸ್ ನಾಯಕರವರು ತಮ್ಮ ತಾಯಿಯ ಹುಟ್ಟು ಹಬ್ಬದ ದಿನ ಸಂಕಲ್ಪಿಸಿದಂತೆ ಒಂದು ಕೊಠಡಿಯ ದೇಣಿಗೆ 8 ಲಕ್ಷ ರೂಪಾಯಿ ಚೆಕ್ಕನ್ನು ಹಸ್ತಾಂತರಿಸಿದರು.
ಉಡುಪಿ ಅನಂತ ವೈದಿಕ ಕೇಂದ್ರದ ವೇದಮೂರ್ತಿ ಶ್ರೀ ಚೇಂಪಿ ರಾಮಚಂದ್ರ ಅನಂತ ಭಟ್ ರವರು ಮಾತನಾಡುತ್ತಾ, ವೇದಿಕೆಯ ಸಮಾಜಮುಖಿ ಯೋಜನೆಗಳಿಗೆ ಸಮಾಜದ ಎಲ್ಲಾ ವರ್ಗಗಳಿಂದಲೂ ದೇಣಿಗೆಗಳು ಹರಿದು ಬರುತ್ತಿದ್ದು, ಅತಿ ಶೀಘ್ರದಲ್ಲಿ ಕಟ್ಟಡ ನಿರ್ಮಾಣ ಸಂಪೂರ್ಣಗೊಂಡು ಅರ್ಹ ಫಲಾನುಭವಿಗಳಿಗೆ ಯೋಜನೆಯ ಲಾಭ ತಲುಪಲಿ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರು ಶ್ರೀ ವೆಂಕಟರಮಣ ದೇವಸ್ಥಾನದ ಟ್ರಸ್ಟಿಗಳಾದ ಶ್ರೀ ಗಣೇಶ್ ಕಾಮತ್, ಶ್ರೀ ಕಿರಣ ಪೈ, ಕುವೈಟ್ ಜಿಎಸ್‌ಬಿ ಸಮಾಜದ ಪ್ರಮುಖರಾದ ಮಂಜೇಶ್ವರ ಶ್ರೀ ಮೋಹನ್ ದಾಸ್ ಕಾಮತ್, ಮಂಗಳೂರಿನ ಸಮಾಜ ಸೇವಕಿ ಶ್ರೀಮತಿ ಪುಷ್ಪಾ ಪ್ರಭು, ವಿದ್ಯಾ ಪೋಷಕ ನಿಧಿ ವಿದ್ಯಾರ್ಥಿ ವೇತನ ಯೋಜನೆಯ ಸಂಚಾಲಕರಾದ ಶ್ರೀ ಮೂಡಬಿದ್ರೆ ವಿಜಯಕುಮಾರ್ ಶೆಣೈ ಬೆಂಗಳೂರು ಉಪಸ್ಥಿತರಿದ್ದು ಶುಭಾಶಂಸನೆಗೈದರು.
ವಯೋವಂದನ ಯೋಜನೆಯ ಮಂಗಳೂರು ವಲಯ ಸಂಚಾಲಕರಾದ ಶ್ರೀ ರಘುನಾಥ ಪ್ರಭು ಅವರು ಸ್ವಾಗತಿಸಿ, ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ರವರು ಕಾರ್ಯಕ್ರಮ ನಿರೂಪಿಸಿದರು.
ಸಹ ಸಂಚಾಲಕರಾದ ಶ್ರೀ ಸುಬ್ರಹ್ಮಣ್ಯ ಪ್ರಭುರವರು ವಂದನಾರ್ಪಣೆಗೈದರು.







