ಕೊಲ್ಲೂರು: ಹೊಳೆಯಲ್ಲಿ ಸ್ನಾನ ಮಾಡುವ ವೇಳೆ ಮುಳುಗಿ ಯುವಕ ಮೃತಪಟ್ಟ ಘಟನೆ ಜಡ್ಕಲ್ ಗ್ರಾಮದ ಗೋವಿಂದ ತೀರ್ಥ ಹೊಳೆಯ ಕಿಳಿನಗುಂಡಿ ಪ್ರದೇಶದಲ್ಲಿ ನಡೆದಿದೆ.
ಮೃತ ಯುವಕನನ್ನು ಬೈಂದೂರು ತಾಲೂಕಿನ ಗೋಳಿಹೊಳೆ ಗ್ರಾಮದ ಸಂದೀಪ್ (28) ಎಂದು ಗುರುತಿಸಲಾಗಿದೆ.
ಮಾರ್ಚ್ 22 ರಂದು ಮಧ್ಯಾಹ್ನ ಸಂದೀಪ್ ತನ್ನ ಸ್ನೇಹಿತರೊಂದಿಗೆ ಗೋವಿಂದ ತೀರ್ಥ ಹೊಳೆಗೆ ಸ್ನಾನಕ್ಕೆ ತೆರಳಿದ್ದನು. ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ಸ್ನಾನ ಮಾಡುತ್ತಿರುವಾಗ ಕಾಲು ಜಾರಿ ಆಳವಾದ ಜಾಗಕ್ಕೆ ಹೋಗಿ ಈಜಲು ಆಗದೆ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಸಂದೀಪ್ ಮುಳುಗಿದ ಬಳಿಕ ಸ್ನೇಹಿತರು ಹಾಗೂ ಸ್ಥಳೀಯರ ಸಹಕಾರದಿಂದ ಹೊಳೆಯಲ್ಲಿ ಹುಡುಕಾಟ ನಡೆಸಲಾಗಿದ್ದು, ಬಳಿಕ ಮೃತದೇಹ ಪತ್ತೆಯಾಗಿದೆ.
ಈ ಕುರಿತು ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.






