ಬಜಪೆ, ಮಾ. 19: ತೆಂಕ ಎಡಪದವು ಗ್ರಾಮದ ಸಾಸ್ತಾವು ದೇವಸ್ಥಾನದ ಸಮೀಪ ಫಾರ್ಚೂನರ್ ಕಾರಿನಲ್ಲಿ ದನಗಳನ್ನು ಕ್ರೂರವಾಗಿ ಸಾಗಿಸುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿದ ಗಸ್ತು ನಿರತ ಬಜಪೆ ಪೊಲೀಸರು ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ದನಗಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಪೊಲೀಸರ ಪ್ರಕಾರ, ಕಾರಿನಲ್ಲಿ ನಾಲ್ಕು ದನಗಳ ಕೈ-ಕಾಲುಗಳನ್ನು ಕಟ್ಟಿ ಅಮಾನುಷವಾಗಿ ಸಾಗಿಸಲಾಗುತ್ತಿತ್ತು. ದನಗಳನ್ನು ಕಳವು ಮಾಡಿ ಮಾಂಸಕ್ಕಾಗಿ ಸಾಗಿಸುತ್ತಿದ್ದ ಶಂಕೆ ವ್ಯಕ್ತವಾಗಿದೆ.
ವಶಕ್ಕೆ ಪಡೆದ ಫಾರ್ಚೂನರ್ ಕಾರಿನ ಅಂದಾಜು ಮೌಲ್ಯ ಸುಮಾರು ₹8 ಲಕ್ಷ ಎಂದು ತಿಳಿದುಬಂದಿದೆ. ಕಾರಿನಲ್ಲಿ ಒಂದು ತಲವಾರು, ಒಂದು ಕಬ್ಬಿಣದ ರಾಡ್, ಮೂರು ನೈಲಾನ್ ಹಗ್ಗಗಳು, ಡಿಎಲ್ 10 ಎಎನ್ 6227 ಸಂಖ್ಯೆಯ ಎರಡು ನಂಬರ್ ಪ್ಲೇಟ್‌ಗಳು ಹಾಗೂ ನೀಲಿ ಬಣ್ಣದ ಟಾರ್ಪಾಲ್ ಪತ್ತೆಯಾಗಿದೆ. ಜಾನುವಾರುಗಳೊಂದಿಗೆ ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯವನ್ನು ಸುಮಾರು ₹8.42 ಲಕ್ಷ ಎಂದು ಅಂದಾಜಿಸಲಾಗಿದೆ.







