ಉಡುಪಿ, ಮಾ. 16 : ಲಕ್ಷಾಂತರ ರೂಪಾಯಿ ಹಣ ನೀಡುವಂತೆ ಯುವತಿಯನ್ನು ಕಿರುಕುಳ ನೀಡಿ, ಹಣ ಪಡೆದು ಬಳಿಕ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ವ್ಯಕ್ತಿಯೊಬ್ಬನ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶರತ್ ಎಂಬಾತ ವಿವಿಧ ಕಾರಣಗಳನ್ನು ಹೇಳಿ ಯುವತಿಯಿಂದ ಹಣ ಪಡೆದುಕೊಳ್ಳುತ್ತಿದ್ದನು ಎನ್ನಲಾಗಿದೆ. ಹಣವನ್ನು ಮರಳಿ ಕೇಳಿದಾಗ ಪ್ರತೀ ಬಾರಿ ಯಾವುದೋ ನೆಪವೊಡ್ಡಿ ತಪ್ಪಿಸಿಕೊಳ್ಳುತ್ತಿದ್ದನೆಂದು ದೂರಿನಲ್ಲಿ ತಿಳಿಸಲಾಗಿದೆ. ಕಳೆದ ತಿಂಗಳು ತನ್ನ ತಂದೆಗೆ ಅನಾರೋಗ್ಯವಾಗಿದೆ ಎಂದು ಹೇಳಿ ₹15 ಲಕ್ಷ ಹಣ ಕೇಳಿದ್ದಾನೆ. ಹಣ ನೀಡಲು ಸಾಧ್ಯವಿಲ್ಲವೆಂದು ತಿಳಿಸಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.
ಆರೋಪಿಯ ಒತ್ತಾಯ ಹಾಗೂ ಬೆದರಿಕೆಗೆ ಭಯಗೊಂಡು ₹14 ಲಕ್ಷ ಹಣ ನೀಡಬೇಕಾಯಿತು ಎಂದು ಮಾರ್ಪಳ್ಳಿ ನಿವಾಸಿ ಮಹಿಮಾ ಅವರು ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಕುರಿತು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.







