ಉಡುಪಿ, ಮಾ. 12 : ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಭಾರತದ ಆರ್ಥಿಕ ಕ್ಷೇತ್ರಕ್ಕೂ ಕೆಲವು ಪ್ರತಿಫಲಗಳು ಕಾಣಿಸಿಕೊಳ್ಳಲು ಆರಂಭವಾಗಿದೆ. ವಿಶೇಷವಾಗಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಲಭ್ಯತೆ ಮತ್ತು ಮಾರಾಟದ ಮೇಲೆ ಪರಿಣಾಮ ಬೀರುವ ಸಾಧ್ಯತೆ ವ್ಯಕ್ತವಾಗಿದ್ದು, ಇದರಿಂದ ಮುಂದಿನ ದಿನಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯಾಗುವ ಆತಂಕವೂ ವ್ಯಕ್ತವಾಗಿದೆ.
ಈ ಪರಿಸ್ಥಿತಿಯ ಪರಿಣಾಮವಾಗಿ ಕರ್ನಾಟಕದ ಹಲವು ಹೊಟೇಲ್ ಉದ್ಯಮಗಳಿಗೂ ತೊಂದರೆ ಎದುರಾಗುತ್ತಿದೆ. ಉಡುಪಿಯ ಹಲವೆಡೆ ಅಡುಗೆ ಅನಿಲದ ಸಾಕಷ್ಟು ಸಂಗ್ರಹ ಇರುವುದರಿಂದ ಪ್ರಸ್ತುತ ಯಾವುದೇ ದೊಡ್ಡ ಅಡಚಣೆ ಕಂಡುಬಂದಿಲ್ಲ. ಆದರೆ ಕೆಲವು ಫಾಸ್ಟ್ ಫುಡ್ ಅಂಗಡಿಗಳಲ್ಲಿ ಅನಿಲ ಸರಬರಾಜಿನ ಕೊರತೆ ಕಾಣಿಸಿಕೊಂಡಿದ್ದು, ವ್ಯವಹಾರ ನಡೆಸಲು ಕಷ್ಟವಾಗುತ್ತಿರುವುದು ವರದಿಯಾಗಿದೆ.
ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳದಿದ್ದರೆ ಕೆಲವು ಫಾಸ್ಟ್ ಫುಡ್ ಅಂಗಡಿಗಳನ್ನು ತಾತ್ಕಾಲಿಕವಾಗಿ ಮುಚ್ಚುವ ಪರಿಸ್ಥಿತಿ ಉಂಟಾಗಬಹುದು ಎಂದು ಸ್ಥಳೀಯ ವ್ಯಾಪಾರಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.







