ಮಾ. 12: 2025ರ ಕುಂಭಮೇಳದ ವೇಳೆ ತನ್ನ ಸೌಂದರ್ಯದಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಗಮನ ಸೆಳೆದಿದ್ದ ಮೊನಾಲಿಸಾ ಭೋಸ್ಲೆ (Monalisa Bhosle) ಇದೀಗ ದಾಂಪತ್ಯ ಜೀವನಕ್ಕೆ ಪ್ರವೇಶಿಸಿದ್ದಾರೆ. ಬುಧವಾರ (ಮಾ.11) ಸಂಜೆ ಕೇರಳದ ತಿರುವನಂತಪುರಂ ಸಮೀಪದ ದೇವಸ್ಥಾನದಲ್ಲಿ ನಟ ಮೊಹಮ್ಮದ್ ಫರ್ಮಾನ್ ಅವರೊಂದಿಗೆ ಅವರು ವಿವಾಹವಾಗಿದ್ದಾರೆ.
ಮೊನಾಲಿಸಾ ಮತ್ತು ಮೊಹಮ್ಮದ್ ಫರ್ಮಾನ್ ಅವರದ್ದು ಅಂತರ್‌ಧರ್ಮೀಯ ವಿವಾಹವಾಗಿದ್ದು, ಕುಟುಂಬದ ಕೆಲವರ ವಿರೋಧದ ನಡುವೆಯೇ ಈ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ತಿರುವನಂತಪುರಂನ ಅರುಮನೂರಿನಲ್ಲಿರುವ ದೇವಸ್ಥಾನದಲ್ಲಿ ನಡೆದ ಮದುವೆ ಸಮಾರಂಭಕ್ಕೆ ಸ್ಥಳೀಯರು ಹಾಗೂ ಕೆಲವು ರಾಜಕೀಯ ಮುಖಂಡರು ಸಾಕ್ಷಿಯಾಗಿದ್ದರು. ಸಂಪ್ರದಾಯದಂತೆ ಅರ್ಚಕರಿಂದ ನೀಡಲಾದ ತಾಳಿಯನ್ನು ಕಟ್ಟಿ, ಕುಂಕುಮವನ್ನು ಇಡುವ ಮೂಲಕ ಫರ್ಮಾನ್ ಅವರು ಮೊನಾಲಿಸಾ ಅವರನ್ನು ವರಿಸಿಕೊಂಡರು. ಮದುವೆಯ ಬಳಿಕ ಮಾತನಾಡಿದ ದಂಪತಿ, “ಕೇರಳ ರಾಜ್ಯದ ಬಗ್ಗೆ ನಮಗೆ ವಿಶೇಷವಾದ ಅಭಿಮಾನವಿದೆ. ಇಲ್ಲಿನ ಪರಿಸರ ಮತ್ತು ಸುರಕ್ಷತೆ ಗಮನಿಸಿ ಇಲ್ಲಿಯೇ ಮದುವೆಯಾಗಲು ತೀರ್ಮಾನಿಸಿದ್ದೇವೆ” ಎಂದು ಹೇಳಿದ್ದಾರೆ.
ಮೊನಾಲಿಸಾ ಇಂದೋರ್ ಮೂಲದವರಾಗಿದ್ದು, ಮೊಹಮ್ಮದ್ ಫರ್ಮಾನ್ ಮಹಾರಾಷ್ಟ್ರದವರು. ಇಬ್ಬರೂ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದು, ಸುಮಾರು ಆರು ತಿಂಗಳ ಹಿಂದೆ ಚಿತ್ರೀಕರಣದ ವೇಳೆ ಪರಿಚಯವಾದದ್ದು ಬಳಿಕ ಸ್ನೇಹ ಪ್ರೀತಿಯಾಗಿ ಬೆಳೆಯಿತು. “ಚಿತ್ರೀಕರಣದ ಸೆಟ್‌ನಲ್ಲಿ ಮೊನಾಲಿಸಾಳನ್ನು ಭೇಟಿಯಾದೆ. ಕಳೆದ ಆರು ತಿಂಗಳಲ್ಲಿ ನಮ್ಮ ಬಾಂಧವ್ಯ ಬಹಳ ಗಾಢವಾಗಿದೆ. ಈ ಅವಧಿ ನಮಗೆ ದೀರ್ಘಕಾಲದ ಸಂಬಂಧದಂತೇ ಅನುಭವವಾಗಿದೆ” ಎಂದು ಫರ್ಮಾನ್ ಹೇಳಿದ್ದಾರೆ.
ಸಿನಿಮಾ ಕೆಲಸದ ನಿಮಿತ್ತ ಕೇರಳಕ್ಕೆ ಆಗಮಿಸಿದ್ದ ಈ ಜೋಡಿ ಅಲ್ಲಿನ ಸಂಸ್ಕೃತಿ ಮತ್ತು ಜನರ ಸ್ನೇಹಭಾವದಿಂದ ಆಕರ್ಷಿತರಾಗಿದ್ದಾರೆ. “ಬೇರೆ ರಾಜ್ಯಗಳಲ್ಲಿ ನಮ್ಮ ಸಂಬಂಧಕ್ಕೆ ವಿರೋಧ ಎದುರಾಗುವ ಸಾಧ್ಯತೆ ಇದ್ದುದರಿಂದ, ಸುರಕ್ಷಿತವೆನಿಸಿದ ಕೇರಳದಲ್ಲಿ ದೇವಸ್ಥಾನದಲ್ಲಿ ಮದುವೆಯಾಗಲು ಅನುಮತಿ ಪಡೆದುಕೊಂಡೆವು” ಎಂದು ಫರ್ಮಾನ್ ತಿಳಿಸಿದ್ದಾರೆ. ಇದೇ ವೇಳೆ ತಮ್ಮ ತಂದೆ ಇನ್ನೂ ಈ ಸಂಬಂಧಕ್ಕೆ ಸಂಪೂರ್ಣ ಒಪ್ಪಿಗೆ ನೀಡಿಲ್ಲ ಎಂಬುದನ್ನೂ ಅವರು ತಿಳಿಸಿದ್ದಾರೆ.
ಕೇರಳದ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಈ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ನವ ದಂಪತಿಗೆ ಶುಭಾಶಯ ಕೋರಿದರು. ಹೊರರಾಜ್ಯದ ಕಲಾವಿದರು ಕೇರಳಕ್ಕೆ ಬಂದು ಅಲ್ಲಿನ ಸಂಪ್ರದಾಯದಂತೆ ವಿವಾಹವಾಗಿರುವುದು ವಿಶೇಷವೆಂದು ಅವರು ಹೇಳಿದ್ದಾರೆ. ಮದುವೆಯ ಬಳಿಕ ತಮ್ಮ ಸುರಕ್ಷತೆಗಾಗಿ ಫರ್ಮಾನ್ ಹಾಗೂ ಮೊನಾಲಿಸಾ ಕೇರಳ ಪೊಲೀಸರ ಬಳಿ ರಕ್ಷಣೆ ಕೋರಿ ಮನವಿ ಸಲ್ಲಿಸಿದ್ದಾರೆ.







