ಕೋಟ, ಮಾ. 06: ಬ್ರಹ್ಮಾವರದಲ್ಲಿರುವ ಕ್ಯಾಶ್ಯೂ ಇಂಡಸ್ಟ್ರೀಸ್ ಸಂಸ್ಥೆಯಲ್ಲಿ 1.61 ಕೋಟಿ ರೂ.ಗೂ ಅಧಿಕ ಮೊತ್ತದ ವಂಚನೆ ನಡೆದಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿರಿಯಾರ ನಿವಾಸಿ ಎಸ್. ಯೋಗೀಶ್ ಅವರು ವಂಚನೆಗೊಳಗಾದವರಾಗಿದ್ದಾರೆ. ಅವರು ಕ್ಯಾಶ್ ಇಂಡಸ್ಟ್ರೀಸ್‌ನ ಮಾಲಕರಾಗಿದ್ದು, ಸಂಸ್ಥೆಯಲ್ಲಿ ತೆಂಗಿನಕಾಯಿ, ಕೊಬ್ಬರಿ ಹಾಗೂ ಅಡುಗೆ ಎಣ್ಣೆ ಖರೀದಿ-ಮಾರಾಟದ ಜೊತೆಗೆ ಗೇರು ಬೀಜ ಸಂಸ್ಕರಣೆ ಕಾರ್ಯ ನಡೆಯುತ್ತಿತ್ತು.
ಸಂಸ್ಥೆಯಲ್ಲಿ ಲೆಕ್ಕಪತ್ರ ನಿರ್ವಹಣೆ ಮತ್ತು ದಾಸ್ತಾನು ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದ ರತೀಶ್ ಎಂಬಾತ ತನ್ನ ಸ್ನೇಹಿತರಾದ ರಾಜೇಶ್, ಸುಮಂತ್ ಸೇರಿದಂತೆ ಇತರರೊಂದಿಗೆ ಕೈಜೋಡಿಸಿ 2023ರ ಏಪ್ರಿಲ್ 1ರಿಂದ 2025ರ ಮೇ 18ರವರೆಗೆ ಸಂಸ್ಥೆಯ ಕೊಬ್ಬರಿ ಹಾಗೂ ತೆಂಗಿನಕಾಯಿಯನ್ನು ಅಕ್ರಮವಾಗಿ ಮಾರಾಟ ಮಾಡಿರುವ ಆರೋಪ ಕೇಳಿಬಂದಿದೆ.
ಈ ಅವಧಿಯಲ್ಲಿ ಸುಮಾರು 56 ಲಕ್ಷ ರೂ. ಮೌಲ್ಯದ ಕೊಬ್ಬರಿ ಮತ್ತು 1,05,72,900 ರೂ. ಮೌಲ್ಯದ ತೆಂಗಿನಕಾಯಿಯನ್ನು ಅನಧಿಕೃತವಾಗಿ ಮಾರಾಟ ಮಾಡಿ ಒಟ್ಟು 1,61,74,500 ರೂ. ಮೊತ್ತವನ್ನು ದುರುಪಯೋಗಪಡಿಸಿಕೊಂಡು ಸಂಸ್ಥೆಗೆ ಆರ್ಥಿಕ ನಷ್ಟ ಉಂಟುಮಾಡಲಾಗಿದೆ ಎಂದು ದೂರು ನೀಡಲಾಗಿದೆ.
ಈ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.







