ಕಾರ್ಕಳ, ಮಾ. 06: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ದೇಶದಲ್ಲಿ ಅಡುಗೆ ಅನಿಲ (ಎಲ್‌ಪಿಜಿ) ಕೊರತೆ ಉಂಟಾಗಲಿದೆ ಎಂಬ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ ಇವು ಕೇವಲ ವದಂತಿಗಳಾಗಿದ್ದು, ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಕರ್ನಾಟಕ ರಾಜ್ಯ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್‌ಪಿಸಿಎಲ್) ಡೀಲರ್ಸ್ ಅಸೋಸಿಯೇಶನ್ ರಾಜ್ಯ ಉಪಾಧ್ಯಕ್ಷ ನಿತ್ಯಾನಂದ ಪೈ ತಿಳಿಸಿದ್ದಾರೆ.
ಪ್ರಸ್ತುತ ರಾಜ್ಯದ ಎಲ್ಲಾ ಎಚ್‌ಪಿಸಿಎಲ್ ಡೀಲರ್‌ಗಳ ಬಳಿಯೂ ಸಮರ್ಪಕ ಪ್ರಮಾಣದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ದಾಸ್ತಾನು ಲಭ್ಯವಿದ್ದು, ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಇಲ್ಲ ಎಂದು ಅವರು ಹೇಳಿದ್ದಾರೆ. ಈ ಕುರಿತು ಎಚ್‌ಪಿಸಿಎಲ್ ಸಂಸ್ಥೆಯೂ ಅಧಿಕೃತ ಮಾಹಿತಿ ನೀಡಿದ್ದು, ದೇಶದಲ್ಲಿ ಇಂಧನ ಭದ್ರತೆ ಸಮರ್ಪಕವಾಗಿದ್ದು, ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆ ವ್ಯವಸ್ಥೆ ಸಾಮಾನ್ಯವಾಗಿ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದೆ.
ಬುಕ್ಕಿಂಗ್ ನಿಯಮದಲ್ಲಿ ಬದಲಾವಣೆ:
ಒಂದು ಕುಟುಂಬಕ್ಕೆ ವರ್ಷಕ್ಕೆ ಗರಿಷ್ಠ 15 ಗ್ಯಾಸ್ ಸಿಲಿಂಡರ್‌ಗಳ ಬಳಕೆಗೆ ಅವಕಾಶವಿದೆ. ಹೊಸದಾಗಿ ಸಿಲಿಂಡರ್ ಬುಕ್ ಮಾಡಲು ಹಿಂದಿನ ಬುಕ್ಕಿಂಗ್ ದಿನಾಂಕದಿಂದ ಕನಿಷ್ಠ ಒಂದು ತಿಂಗಳ ಅಂತರ ಇರಬೇಕು ಎಂಬ ನಿಯಮವನ್ನು ಅನುಸರಿಸಲಾಗುತ್ತಿದೆ ಎಂದು ನಿತ್ಯಾನಂದ ಪೈ ತಿಳಿಸಿದ್ದಾರೆ.







