ಕಾರ್ಕಳ, ಮಾ. 5: ಕಾಂತಾವರ ಗ್ರಾಮದ ಪೆರ್ಲಗುತ್ತು ಪ್ರದೇಶದಲ್ಲಿ ಅಕ್ಕನ ಮೇಲೆ ತಮ್ಮನೇ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನ ಪ್ರಕಾರ, ಫೆಬ್ರವರಿ 25ರಂದು ಮನೆಯ ನಾಗಬನದಲ್ಲಿ ಪೂಜೆ ಮುಗಿದ ಬಳಿಕ ಮನೆಗೆ ಬಂದ ಅಭಿನಂದನ್ ಅಡ್ಯಂತಾಯ ಅವರು ಪೂಜೆ ನಡೆಸಿದ ಪುರೋಹಿತರನ್ನು ಅವಾಚ್ಯ ಪದಗಳಿಂದ ನಿಂದಿಸಲು ಆರಂಭಿಸಿದ್ದರು.
ಈ ವೇಳೆ ಅದನ್ನು ತಡೆಯಲು ಮುಂದಾದ ಅವರ ಅಕ್ಕ ಸ್ವಾತಿ ಶೆಟ್ಟಿ (45) ಅವರ ಜಡೆಯನ್ನು ಹಿಡಿದು ಎಳೆದ ಆರೋಪಿ, ತಲೆಯನ್ನು ಮನೆಯ ಚಾವಡಿಯ ಕಂಬಕ್ಕೆ ಹೊಡೆದಿದ್ದಾರೆ ಎನ್ನಲಾಗಿದೆ.
ನಂತರ ಆಕೆಯನ್ನು ಅಂಗಳಕ್ಕೆ ಎಳೆದುಕೊಂಡು ಹೋಗಿ ಮರದ ರೀಪಿನಿಂದ ಕೈಕಾಲುಗಳಿಗೆ ಹೊಡೆದು ಗಾಯಗೊಳಿಸಿದ್ದು, ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.





