ಉಡುಪಿ, ಫೆ. 26: ಉಡುಪಿ ನಗರಸಭೆಯಲ್ಲಿ ತೆರಿಗೆ ಪಾವತಿ ರಶೀದಿಗಳಲ್ಲಿ ನಡೆದಿರುವ ಅಕ್ರಮದ ಬಗ್ಗೆ ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಬಿಜೆಪಿ ಉಡುಪಿ ನಗರ ಘಟಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ನಗರಾಧ್ಯಕ್ಷ ದಿನೇಶ್ ಅಮೀನ್ ಅವರ ನೇತೃತ್ವದಲ್ಲಿ ಪ್ರತಿನಿಧಿ ಮಂಡಳಿ ಈ ಮನವಿಯನ್ನು ಸಲ್ಲಿಸಿತು.
ನಗರಸಭೆಯಲ್ಲಿ ತೆರಿಗೆ ವಂಚನೆ ಪ್ರಕರಣ ಬೆಳಕಿಗೆ ಬಂದಿರುವ ಹಿನ್ನೆಲೆ, ಪೌರಾಯುಕ್ತರು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ತೆರಿಗೆ ಪಾವತಿ ಚಾಲನ್‌ಗಳಿಗೆ ನಕಲಿ ಬ್ಯಾಂಕ್ ಮುದ್ರೆ ಬಳಕೆ ಮಾಡಿರುವುದು ಮಾಧ್ಯಮಗಳಲ್ಲಿ ವರದಿಯಾಗಿದ್ದು, ಇದರಿಂದ ಸಾರ್ವಜನಿಕರಲ್ಲಿ ಗೊಂದಲ ಮತ್ತು ಆತಂಕ ಉಂಟಾಗಿದೆ.
ಇತ್ತೀಚಿನ ದಿನಗಳಲ್ಲಿ ನಕಲಿ ರಶೀದಿ ಪ್ರಕರಣಗಳು ಹಂತ ಹಂತವಾಗಿ ಬಹಿರಂಗವಾಗುತ್ತಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಸೂಚಿಸುತ್ತದೆ. ಉಡುಪಿ ನಗರಸಭೆ ತನ್ನದೇ ಆದ ಪ್ರತಿಷ್ಠೆ ಮತ್ತು ವಿಶ್ವಾಸಾರ್ಹತೆಯನ್ನು ಹೊಂದಿರುವ ಸಂಸ್ಥೆಯಾಗಿದ್ದು, ಇಂತಹ ಘಟನೆಗಳು ತೆರಿಗೆದಾರರ ನಂಬಿಕೆಗೆ ಧಕ್ಕೆಯುಂಟುಮಾಡಿವೆ ಎಂದು ಬಿಜೆಪಿ ಅಭಿಪ್ರಾಯಪಟ್ಟಿದೆ.
ಈ ಪ್ರಕರಣದಲ್ಲಿ ಬ್ಯಾಂಕ್ ಹಾಗೂ ನಗರಸಭೆಯ ಕೆಲ ಅಧಿಕಾರಿಗಳು ಅಥವಾ ಸಿಬ್ಬಂದಿ ಭಾಗಿಯಾಗಿರುವ ಸಾಧ್ಯತೆಯನ್ನೂ ನಿರ್ಲಕ್ಷ್ಯಿಸಬಾರದು. ಸಂಬಂಧಪಟ್ಟ ಎಲ್ಲರ ಮೇಲೂ ಕಾನೂನಾತ್ಮಕ ಕ್ರಮ ಕೈಗೊಂಡು, ಇಲಾಖಾ ಮಟ್ಟದ ಸಮಗ್ರ ತನಿಖೆ ನಡೆಸಬೇಕು. ಜೊತೆಗೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.







