ಬ್ರಹ್ಮಾವರ, ಫೆ. 21: ಸಮೀಪದ ಆರೂರು ಕ್ರಾಸ್ ಬಳಿ ಶುಕ್ರವಾರ ಮುಂಜಾನೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸ್ಕೂಟಿ ಸವಾರರೊಬ್ಬರು ಮೃತಪಟ್ಟಿದ್ದಾರೆ.
ಜೆಪಿ ನಗರ ನಿವಾಸಿ ಶೇಖರ್ ಟಿ. ಕುಲಾಲ್ (56) ಅವರು ದುರಂತದಲ್ಲಿ ಜೀವ ಕಳೆದುಕೊಂಡವರು. ಅವರು ಸಾಗುತ್ತಿದ್ದ ವೇಳೆ ಪೇತ್ರಿ ದಿಕ್ಕಿನಿಂದ ಡಿವೈಡರ್ ದಾಟಿ ಬಂದ ಸರಕು ಸಾಗಣೆ ವಾಹನವು ಹಿಂದಿನಿಂದ ಸ್ಕೂಟಿಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ಅಪಘಾತದ ಪರಿಣಾಮವಾಗಿ ಶೇಖರ್ ಅವರಿಗೆ ತಲೆ ಮತ್ತು ಕೈ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ಶೇಖರ್ ಅವರು ನೀಲಾವರ ಕ್ರಾಸ್ ಸಮೀಪದ ಖಾಸಗಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರ ನಿಧನದಿಂದ ಪತ್ನಿ ಹಾಗೂ ಪುತ್ರಿ ಅನಾಥರಾಗಿದ್ದಾರೆ.
ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.







