ರಾಯಚೂರು, ಫೆ. 20: ಮಂತ್ರಾಲಯದ ಜಗದ್ಗುರು ಶ್ರೀಮನ್‌ಮಧ್ವಾಚಾರ್ಯ ಮೂಲ ಮಹಾಸಂಸ್ಥಾನದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನಡೆಯುತ್ತಿರುವ ಶ್ರೀ ರಾಘವೇಂದ್ರ ಗುರು ವೈಭವೋತ್ಸವಕ್ಕೆ ಬುಧವಾರ ವಿಧ್ಯುಕ್ತ ಚಾಲನೆ ನೀಡಲಾಯಿತು.
ಶ್ರೀಗುರುರಾಯರ 405ನೇ ಪಟ್ಟಾಭಿಷೇಕ ಮಹೋತ್ಸವ ಹಾಗೂ 431ನೇ ವರ್ಧಂತೋತ್ಸವದ ಅಂಗವಾಗಿ ಆಯೋಜಿಸಲಾದ ಈ ಏಳು ದಿನಗಳ ಉತ್ಸವ (ಫೆ.18ರಿಂದ 24ರವರೆಗೆ) ಶ್ರೀಮಠದ ಪೀಠಾಧಿಪತಿ ಡಾ. ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಸಾನ್ನಿಧ್ಯದಲ್ಲಿ ನಡೆಯುತ್ತಿದೆ. ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸರಣಿ, ಧಾರ್ಮಿಕ ಪ್ರವಚನಗಳು, ವಿವಿಧ ಭಾಷೆಗಳಲ್ಲಿ ರಚಿತ ಗ್ರಂಥಗಳ ಲೋಕಾರ್ಪಣೆ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮಗಳಿಗೆ ಸ್ವಾಮೀಜಿಗಳು ಚಾಲನೆ ನೀಡಿದರು.
ಫೆ.19ರಂದು ಶ್ರೀಮಠದ ಪ್ರಾಕಾರದಲ್ಲಿರುವ ಡೋಲೋತ್ಸವ ಮಂಟಪದಲ್ಲಿ ಶ್ರೀಗುರುರಾಯರ 405ನೇ ಪಾದುಕಾ ಪಟ್ಟಾಭಿಷೇಕ ನಡೆಯಲಿದೆ. ಫೆ.19 ಮತ್ತು 22ರಂದು ಸಂಜೆ 6.30ಕ್ಕೆ ಶ್ರೀ ಪರಿಮಳ ತೀರ್ಥ ಪುಷ್ಕರಣಿಯಲ್ಲಿ ತೆಪೋತ್ಸವ ಜರುಗಲಿದೆ. ಫೆ.23ರಂದು ಟಿಟಿಡಿಯ ಶ್ರೀವಾರಿ ಶೇಷವಸ್ತ್ರ ಸಮರ್ಪಣೆ ನಡೆಯಲಿದ್ದು, ಫೆ.24ರಂದು ವರ್ಧಂತಿ ಉತ್ಸವದ ಅಂಗವಾಗಿ ಚೆನ್ನೈನ ನಾದಹಾರ ಟ್ರಸ್ಟ್ ವತಿಯಿಂದ 21ನೇ ವರ್ಷದ ನಾದಹಾರ ಸೇವೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನೆರವೇರಲಿವೆ.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ನಟ ರಿಷಬ್ ಶೆಟ್ಟಿ, ಸಾಯಿಕುಮಾರ ಸೇರಿದಂತೆ ವಿವಿಧ ರಾಜ್ಯಗಳ ಸಚಿವರು, ಶಾಸಕರು, ಸಂಸದರು, ನ್ಯಾಯಾಧೀಶರು ಹಾಗೂ ಪ್ರಮುಖ ದೇವಸ್ಥಾನಗಳ ಪ್ರಧಾನ ಅರ್ಚಕರು ಸೇರಿದಂತೆ ಅನೇಕ ಗಣ್ಯರು ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.







