ಬೆಂಗಳೂರು, ಫೆ. 19:ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1ರ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಉಂಟಾಗುವ ಪರೀಕ್ಷಾ ಗೊಂದಲಗಳನ್ನು ನಿವಾರಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಾಯವಾಣಿ ಸೇವೆಯನ್ನು ಆರಂಭಿಸಿದೆ.
ಈ ಕುರಿತು ಇಲಾಖೆ ಮಾಹಿತಿ ನೀಡಿದ್ದು, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳ ಸಂಬಂಧ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಆತ್ಮವಿಶ್ವಾಸ ಹೆಚ್ಚಿಸುವ ಉದ್ದೇಶದಿಂದ 080 23310076 ಹಾಗೂ 080 23310075 ಸಂಖ್ಯೆಗಳ ಸಹಾಯವಾಣಿಗಳನ್ನು ಜಾರಿಗೆ ತಂದಿದೆ. ವಿದ್ಯಾರ್ಥಿಗಳು ಈ ಸಂಖ್ಯೆಗೆ ಕರೆಮಾಡಿ ಪರೀಕ್ಷೆ ಕುರಿತ ಪ್ರಶ್ನೆಗಳು, ಅನುಮಾನಗಳು ಮತ್ತು ಸಮಸ್ಯೆಗಳ ಕುರಿತು ಸ್ಪಷ್ಟನೆ ಪಡೆಯಬಹುದು ಎಂದು ತಿಳಿಸಲಾಗಿದೆ.







