ಉಡುಪಿ,ಫೆ.19: ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾದ ಅಪರಿಚಿತನ ಮಾತಿಗೆ ಮೋಸಹೋಗಿ ಉಡುಪಿಯ ಮಹಿಳೆಯೊಬ್ಬರು ಬರೋಬ್ಬರಿ 7 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ.
ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ಫೆ. 4, 2026ರಂದು Amadeo Luca ಎಂಬ ಫೇಸ್‌ಬುಕ್ ಖಾತೆಯಿಂದ ಅಪರಿಚಿತ ವ್ಯಕ್ತಿಯೊಬ್ಬರು ಮಹಿಳೆಗೆ ಸಂದೇಶ ಕಳುಹಿಸಿದ್ದಾನೆ. ನಂತರ ಇಬ್ಬರ ನಡುವೆ ಮೆಸೆಂಜರ್ ಹಾಗೂ ವಾಟ್ಸಾಪ್ ಮೂಲಕ ನಿರಂತರ ಸಂಭಾಷಣೆ ನಡೆದಿತ್ತು.
ಫೆ. 8ರಂದು ಆ ವ್ಯಕ್ತಿ ಮಹಿಳೆಗೆ ಬಂಗಾರದ ಆಭರಣಗಳು, ಮೊಬೈಲ್ ಫೋನ್ ಹಾಗೂ ಇತರೆ ಉಡುಗೊರೆಗಳನ್ನು ಪಾರ್ಸೆಲ್ ಮೂಲಕ ಕಳುಹಿಸಿರುವುದಾಗಿ ತಿಳಿಸಿದ್ದಾನೆ. ಪಾರ್ಸೆಲ್‌ನಲ್ಲಿ ಡಾಲರ್ ನಾಣ್ಯಗಳಿದ್ದು, ಅದನ್ನು ಪಡೆಯಲು ರೂ.45,000 ಶುಲ್ಕ ಪಾವತಿಸಬೇಕೆಂದು ಹೇಳಿದ್ದಾನೆ. ಇದನ್ನು ನಂಬಿದ ಮಹಿಳೆ NEFT ಮೂಲಕ ಆ ಮೊತ್ತವನ್ನು ಅಪರಿಚಿತ ಖಾತೆಗೆ ವರ್ಗಾವಣೆ ಮಾಡಿದ್ದಾರೆ.
ಆದರೆ ಬಳಿಕವೂ ವಿವಿಧ ಕಾರಣಗಳನ್ನು ನೀಡುತ್ತಾ ‘ಟ್ಯಾಕ್ಸ್’, ‘ಕಸ್ಟಮ್ಸ್ ಶುಲ್ಕ’ ಸೇರಿದಂತೆ ಇತರೆ ಪಾವತಿಗಳನ್ನು ಮಾಡಬೇಕೆಂದು ಅಪರಿಚಿತರು ಒತ್ತಾಯಿಸಿದ್ದಾರೆ. ಅವರ ಮಾತಿಗೆ ಮತ್ತೆ ಮೋಸಹೋಗಿದ ಮಹಿಳೆ, ತಮ್ಮ ಬ್ಯಾಂಕ್ ಆಫ್ ಬರೋಡಾ ಖಾತೆಯಿಂದ ಹಂತ ಹಂತವಾಗಿ ಒಟ್ಟು ರೂ.7,10,000 ಅನ್ನು ವಿವಿಧ ಖಾತೆಗಳಿಗೆ NEFT ಹಾಗೂ RTGS ಮೂಲಕ ವರ್ಗಾಯಿಸಿದ್ದಾರೆ.
ಇಷ್ಟಾದರೂ ಯಾವುದೇ ಪಾರ್ಸೆಲ್ ಬಂದಿರಲಿಲ್ಲ. ಮತ್ತಷ್ಟು ಹಣದ ಬೇಡಿಕೆ ಮುಂದುವರಿದಾಗ ಮಹಿಳೆಗೆ ಮೋಸವಾಗಿರುವುದು ತಿಳಿದುಬಂದಿದ್ದು, ಅವರು ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರೊಂದಿಗೆ ವ್ಯವಹರಿಸುವಾಗ ಜಾಗ್ರತೆ ವಹಿಸುವಂತೆ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.







