ಬೆಂಗಳೂರು, 10 ಫೆಬ್ರವರಿ 2026: ಭಾರತದ ಪ್ರಮುಖ ಕಾರು ಮತ್ತು ಎಸ್‌ಯುವಿ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್ (ಟಿಎಂಪಿವಿ) ಮತ್ತು ಅದರ ಅಂಗಸಂಸ್ಥೆಯಾದ ಜಾಗ್ವಾರ್ ಲ್ಯಾಂಡ್ ರೋವರ್ ಆಟೋಮೋಟಿವ್ ಪಿಎಲ್‌ಸಿ (ಜೆಎಲ್ಆರ್), ತಮಿಳುನಾಡಿನ ರಾಣಿಪೇಟೆ ಜಿಲ್ಲೆಯ ಪನಪಾಕ್ಕಂನಲ್ಲಿರುವ ತಮ್ಮ ಹೊಸ ಉತ್ಪಾದನಾ ಘಟಕದ ಕಾರ್ಯಾರಂಭ ಮಾಡಿದೆ.
ತಮಿಳುನಾಡಿನ ಮಾನ್ಯ ಮುಖ್ಯಮಂತ್ರಿಗಳಾದ ತಿರು ಎಂ.ಕೆ. ಸ್ಟಾಲಿನ್ ಮತ್ತು ಟಾಟಾ ಸನ್ಸ್ ಹಾಗೂ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ನ ಅಧ್ಯಕ್ಷರಾದ ಶ್ರೀ ಎನ್. ಚಂದ್ರಶೇಖರನ್ ಅವರು ಈ ಘಟಕವನ್ನು ಔಪಚಾರಿಕವಾಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಚಿವರು, ಸಾರ್ವಜನಿಕ ಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು ಮತ್ತು ಟಿಎಂಪಿವಿ, ಜೆಎಲ್ಆರ್ ಹಾಗೂ ಟಾಟಾ ಗ್ರೂಪ್‌ನ ಹಿರಿಯ ನಾಯಕರು ಉಪಸ್ಥಿತರಿದ್ದರು.
ಈ ಪ್ರಸ್ತುತ ಘಟಕವು ಟಿಎಂಪಿವಿ ಮತ್ತು ಜೆಎಲ್ಆರ್ ಎರಡೂ ಬ್ರ್ಯಾಂಡ್ ಗಳ ಎಲೆಕ್ಟ್ರಿಕ್ ವಾಹನಗಳು ಸೇರಿದಂತೆ ಮುಂದಿನ ಪೀಳಿಗೆಯ ವಾಹನಗಳನ್ನು ತಯಾರಿಸಲು ಅಭಿವೃದ್ಧಿಪಡಿಸಲಾದ ‘ಗ್ರೀನ್‌ಫೀಲ್ಡ್’ ಪ್ಲಾಂಟ್ ನ ಮೊದಲ ಹಂತವಾಗಿದ್ದು, ಸ್ಥಳೀಯವಾಗಿ ತಯಾರಾದ, ಈ ಕಾರ್ಖಾನೆಯಿಂದ ಹೊರಬಂದ ಮೊದಲ ವಾಹನವಾಗಿ ಜೆಎಲ್‌ಆರ್‌ನ ‘ರೇಂಜ್ ರೋವರ್ ಇವೋಕ್’ ಮೂಡಿಬಂದಿದೆ. ಈ ಮಾದರಿಯು ತನ್ನ ಐಷಾರಾಮಿತನ ಮತ್ತು ಅಸಾಧಾರಣ ಕುಶಲತೆಗೆ ಜಾಗತಿಕವಾಗಿ ಹೆಸರುವಾಸಿಯಾಗಿದೆ.
ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ – ಜೆಎಲ್‌ಆರ್ (ಜೆಎಲ್ಆರ್) ಘಟಕವನ್ನು ಉದ್ಘಾಟಿಸಿ ಮಾತನಾಡಿದ ತಮಿಳುನಾಡಿನ ಮಾನ್ಯ ಮುಖ್ಯಮಂತ್ರಿಗಳಾದ ತಿರು ಎಂ.ಕೆ. ಸ್ಟಾಲಿನ್ ಅವರು* , “ರಾಷ್ಟ್ರ ನಿರ್ಮಾಣದಲ್ಲಿ ಟಾಟಾ ಗ್ರೂಪ್ ದೀರ್ಘಕಾಲದಿಂದ ಪ್ರಮುಖ ಪಾತ್ರ ವಹಿಸುತ್ತಿದೆ ಮತ್ತು ತಮಿಳುನಾಡಿನೊಂದಿಗೆ ಗಾಢವಾದ, ಐತಿಹಾಸಿಕ ಪಾಲುದಾರಿಕೆಯನ್ನು ಹೊಂದಿದೆ. ಈ ಹೊಸ ಉತ್ಪಾದನಾ ಘಟಕದ ಕಾರ್ಯಾಚರಣೆಯ ಪ್ರಾರಂಭ ಮತ್ತು ರಾಣಿಪೇಟೆಯ ಪನಪಾಕ್ಕಂನಲ್ಲಿ ಮೊದಲ ‘ರೇಂಜ್ ರೋವರ್ ಇವೋಕ್’ ಬಿಡುಗಡೆ ಮೂಲಕ ವಿಶ್ವದರ್ಜೆಯ ಆಟೋಮೋಟಿವ್ ಉತ್ಪಾದನೆಯ ಪ್ರಕ್ರಿಯೆಗೆ ಸಾಕ್ಷಿಯಾಗಲು ರಾಜ್ಯವು ಹೆಮ್ಮೆಪಡುತ್ತದೆ. ತಮಿಳುನಾಡು ಈ ಮಹತ್ವದ ಮೈಲಿಗಲ್ಲನ್ನು ಸ್ವಾಗತಿಸುತ್ತದೆ. ಉದ್ಯೋಗಗಳನ್ನು ಸೃಷ್ಟಿಸುವ, ಆವಿಷ್ಕಾರವನ್ನು ಪ್ರೋತ್ಸಾಹಿಸುವ ಮತ್ತು ಉತ್ಪಾದನೆ ಹಾಗೂ ಸಾರಿಗೆ ಕ್ಷೇತ್ರದಲ್ಲಿ ಭಾರತದ ಪ್ರಮುಖ ಕೇಂದ್ರವಾಗಿ ನಮ್ಮ ಸ್ಥಾನವನ್ನು ಬಲಪಡಿಸುವ ಉದ್ಯಮಗಳನ್ನು ಬೆಂಬಲಿಸಲು ನಾವು ಬದ್ಧರಾಗಿದ್ದೇವೆ” ಎಂದು ಹೇಳಿದರು.

*ಈ ಸಂದರ್ಭದಲ್ಲಿ ಮಾತನಾಡಿದ ಟಾಟಾ ಸನ್ಸ್ ಮತ್ತು ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್‌ನ ಅಧ್ಯಕ್ಷರಾದ ಶ್ರೀ ಎನ್. ಚಂದ್ರಶೇಖರನ್ ಅವರು* , “ನಮ್ಮ ಪನಪಾಕ್ಕಂ ಘಟಕದ ಉದ್ಘಾಟನೆಯು ಸುಸ್ಥಿರ ಮತ್ತು ಭವಿಷ್ಯಕ್ಕೆ ಸಿದ್ಧವಾದ ಉತ್ಪಾದನಾ ಕ್ಷೇತ್ರದಲ್ಲಿ ಭಾರತವನ್ನು ಮುಂಚೂಣಿಯಲ್ಲಿ ನಿಲ್ಲಿಸುವ ಟಾಟಾ ಗ್ರೂಪ್ ನ ಪಯಣದಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಿದೆ. ಕೈಗಾರಿಕಾ ಶ್ರೇಷ್ಠತೆ, ಆವಿಷ್ಕಾರ ಮತ್ತು ಒಳಗೊಳ್ಳುವಿಕೆಯ ಬೆಳವಣಿಗೆಯನ್ನು ಸಾಧಿಸುತ್ತಿರುವ ತಮಿಳುನಾಡು ರಾಜ್ಯದೊಂದಿಗೆ ನಮ್ಮ ದೀರ್ಘಕಾಲದ ಪಾಲುದಾರಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ನಾವು ಹೆಮ್ಮೆಪಡುತ್ತೇವೆ. ಈ ಘಟಕದ ಮೂಲಕ, ಭಾರತ ಮತ್ತು ಪ್ರಪಂಚದಾದ್ಯಂತದ ಗ್ರಾಹಕರಿಗಾಗಿ ಅಸಾಧಾರಣ ಗುಣಮಟ್ಟ, ಕುಶಲತೆ ಮತ್ತು ತಂತ್ರಜ್ಞಾನದ ವಾಹನಗಳನ್ನು ತಯಾರಿಸಲು ನಾವು ಎದುರು ನೋಡುತ್ತಿದ್ದೇವೆ” ಎಂದು ತಿಳಿಸಿದರು.
*ಪನಪಾಕ್ಕಂ ಘಟಕದ ಬಗ್ಗೆ*
ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ನ (ಟಿಎಂಪಿವಿ) ಪನಪಾಕ್ಕಂ ಘಟಕವು ವಿಶ್ವದರ್ಜೆಯ ವಾಹನಗಳನ್ನು ತಯಾರಿಸಲು ಸುಧಾರಿತ ಉತ್ಪಾದನಾ ತಂತ್ರಜ್ಞಾನಗಳು ಮತ್ತು ನೈಪುಣ್ಯ ಹೊಂದಿದ ಕಾರ್ಯಪಡೆಯನ್ನು ಹೊಂದಿದೆ.
ಈ ಘಟಕವು ತಮಿಳುನಾಡಿನಾದ್ಯಂತ ಆಯ್ಕೆಯಾದ ವೈವಿಧ್ಯಮಯ ತಾಂತ್ರಿಕ ತಂಡದಿಂದ ನಿರ್ವಹಿಸಲ್ಪಡುತ್ತಿದ್ದು, ಈ ಸಿಬ್ಬಂದಿ ಟಾಟಾ ಮೋಟಾರ್ಸ್‌ನ ‘ಲಕ್ಷ್ಯ’ ಕಾರ್ಯಕ್ರಮದ ಭಾಗವಾಗಿದ್ದಾರೆ. ಇದು “ಕಲಿಯುತ್ತಾ ಸಂಪಾದಿಸಿ” ಎಂಬ ಯೋಜನೆಯಾಗಿದ್ದು, ಕೆಳ ಹಂತದ ಕೆಲಸಗಾರರು ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಹುದ್ದೆಗಳಿಗೆ ಏರಲು ಪ್ರೋತ್ಸಾಹ, ಬೆಂಬಲ ನೀಡುತ್ತದೆ. ರಾಜ್ಯಾದ್ಯಂತ ಇರುವ ಪಾಲಿಟೆಕ್ನಿಕ್ ಪದವೀಧರರ ಕಠಿಣ ಮೌಲ್ಯಮಾಪನದ ಮೂಲಕ ಇವರನ್ನು ಆಯ್ಕೆ ಮಾಡಲಾಗಿದ್ದು, ಇವರು ಜೆಎಲ್‌ಆರ್ ಕೇಂದ್ರಗಳಲ್ಲಿ ಐದು ತಿಂಗಳ ತೀವ್ರತರವಾದ ಪ್ರಾಯೋಗಿಕ ತರಬೇತಿಯನ್ನು ಪೂರೈಸಿದ್ದಾರೆ. ಈ ಮೂಲಕ ಇವರು ವಿಶ್ವದರ್ಜೆಯ ಕಾರ್ಯಾಚರಣೆ ಮತ್ತು ತಾಂತ್ರಿಕ ಪ್ರಾವೀಣ್ಯತೆಯನ್ನು ಹೊಂದಿದ್ದಾರೆ.
ಕೆಲಸ ಮಾಡುತ್ತಲೇ ಪ್ರತಿಷ್ಠಿತ ವಿಶ್ವವಿದ್ಯಾನಿಲಯದಿಂದ ಕಂಪನಿ ಪ್ರಾಯೋಜಿತ ಬಿ.ಟೆಕ್ ಪದವಿ ಪಡೆಯುವ ಅವಕಾಶ ಇವರಿಗಿದ್ದು, ಇದು ಅವರ ವೈಯಕ್ತಿಕ ಬೆಳವಣಿಗೆ ಮತ್ತು ವೃತ್ತಿಪರ ಬೆಳವಣಿಗೆಗೆ ಸಹಕಾರಿಯಾಗಿದೆ. ಅದರೊಂದಿಗೆ ತಮ್ಮ ಕುಟುಂಬದ ಜವಾಬ್ದಾರಿಯನ್ನೂ ಇವರು ನಿಭಾಯಿಸಬಹುದಾಗಿದೆ. ಇವರ ಈ ಪಯಣವು, ಸ್ಥಳೀಯ ಪ್ರತಿಭೆಗಳ ಅಭಿವೃದ್ಧಿ ಮತ್ತು ಕೌಶಲ್ಯ ತರಬೇತಿಯು ಉತ್ಪಾದನಾ ಕ್ಷೇತ್ರವನ್ನು ಹೇಗೆ ವೇಗಗೊಳಿಸುತ್ತದೆ ಮತ್ತು ಶಾಶ್ವತ ಆರ್ಥಿಕ ಹಾಗೂ ಸಾಮಾಜಿಕ ಪರಿಣಾಮವನ್ನು ಹೇಗೆ ಬೀರುತ್ತದೆ ಎಂಬುದನ್ನು ತೋರಿಸುತ್ತದೆ.
ಈಗ ಕಾರ್ಯಾಚರಣೆ ಆರಂಭವಾಗಿರುವುದರಿಂದ, ವಾಹನ ಉತ್ಪಾದನೆಯನ್ನು ಹಂತಹಂತವಾಗಿ ಹೆಚ್ಚಿಸಲಾಗುವುದು. ಮುಂದಿನ 5-7 ವರ್ಷಗಳಲ್ಲಿ ಈ ಘಟಕವು ತನ್ನ ಪೂರ್ಣ ಸಾಮರ್ಥ್ಯವಾದ ವರ್ಷಕ್ಕೆ 2,50,000 ವಾಹನಗಳ ಉತ್ಪಾದನೆಯ ಗುರಿಯನ್ನು ತಲುಪಲಿದ್ದು, ಭಾರತೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳ ಬೇಡಿಕೆಯನ್ನು ಪೂರೈಸಲಿದೆ.
ಒಟ್ಟಾರೆಯಾಗಿ, ಟಿಎಂಪಿವಿ ತನ್ನ ದೀರ್ಘಕಾಲದ ಬೆಳವಣಿಗೆಯ ಮಹತ್ವಾಕಾಂಕ್ಷೆಗಳಿಗೆ ಪೂರಕವಾಗಿ ಈ ಅತ್ಯಾಧುನಿಕ ಉತ್ಪಾದನಾ ಘಟಕವನ್ನು ನಿರ್ಮಿಸಲು ಅಂದಾಜು 9,000 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುವ ಉದ್ದೇಶ ಹೊಂದಿದೆ. ಈ ಕಾರ್ಖಾನೆಯು 5,000ಕ್ಕೂ ಹೆಚ್ಚು ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದ್ದು, ಕೌಶಲ್ಯ ಅಭಿವೃದ್ಧಿಯನ್ನು ಉತ್ತೇಜಿಸುವ ಜೊತೆಗೆ ಬಲಿಷ್ಠವಾದ ಪೂರಕ ಉದ್ಯಮಗಳ ಬೆಳವಣಿಗೆಗೆ ಬೆಂಬಲ ನೀಡಲಿದೆ.
ಪನಪಾಕ್ಕಂ ಘಟಕವು ಟಿಎಂಪಿವಿ ಸಂಸ್ಥೆಯ “ಸುಸ್ಥಿರತೆಗೆ ಮೊದಲ ಆದ್ಯತೆ” ಎಂಬ ತತ್ವಕ್ಕೆ ನಿದರ್ಶನವಾಗಿದ್ದು, ಪ್ರತಿ ಹಂತದಲ್ಲೂ ಪರಿಸರ ಜವಾಬ್ದಾರಿಯುತ ಕಾರ್ಯಾಚರಣೆಗಳನ್ನು ಅಳವಡಿಸಿಕೊಂಡಿದೆ. ಈ ಕಾರ್ಖಾನೆಯು ಸಂಪೂರ್ಣವಾಗಿ ನವೀಕರಿಸಬಹುದಾದ ಇಂಧನ ಮೂಲಗಳ ಮೂಲಕ ನಡೆಯುವಂತೆ ವಿನ್ಯಾಸಗೊಳಿಸಲಾಗಿದೆ. ಇದು ‘ವಾಟರ್ ಪಾಸಿಟಿವ್’ (ಬಳಸುವ ನೀರಿಗಿಂತ ಹೆಚ್ಚು ನೀರನ್ನು ಮರುಪೂರಣ ಮಾಡುವುದು) ಆಗಿರಲಿದ್ದು, ಆಟೋಮೋಟಿವ್ ಕ್ಷೇತ್ರದಲ್ಲಿ ಹಸಿರು ಉತ್ಪಾದನೆಯಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸಲಿದೆ. ಸುಸ್ಥಿರ ಅಭ್ಯಾಸಗಳಿಗೆ ಹೆಚ್ಚಿನ ಆದ್ಯತೆ ನೀಡಿರುವ ಈ ಘಟಕವು ದಕ್ಷತೆಯನ್ನು ಹೆಚ್ಚಿಸಲು, ಇಂಗಾಲ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಮತ್ತು ಕಠಿಣವಾದ ಜಾಗತಿಕ ಪರಿಸರ ಮಾನದಂಡಗಳನ್ನು ಪಾಲಿಸಲು ಬದ್ಧವಾಗಿದೆ.







