ಕುಂದಾಪುರ, ಫೆ. 02 : ತೆಕ್ಕಟ್ಟೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿ–66ರಲ್ಲಿ, ಕೆನರಾ ಬ್ಯಾಂಕ್ ಎದುರು ಎರಡು ಕಾರುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ವಾಹನಗಳು ಗಂಭೀರವಾಗಿ ಜಖಂಗೊಂಡ ಘಟನೆ ಫೆಬ್ರವರಿ 1ರ ಬೆಳಗ್ಗೆ ಸುಮಾರು 11.30ರ ವೇಳೆಗೆ ನಡೆದಿದೆ.
ಕುಂದಾಪುರದಿಂದ ಉಡುಪಿ ದಿಕ್ಕಿಗೆ ಸಾಗುತ್ತಿದ್ದ ಕಾರೊಂದು, ತೆಕ್ಕಟ್ಟೆ ರಾ.ಹೆ.66ರ ಎಡಭಾಗದಲ್ಲಿರುವ ಬಣ್ಣದಬೈಲು ಸಂಪರ್ಕಿಸುವ ಒಳರಸ್ತೆಗೆ ತಿರುಗಲು ಪ್ರಯತ್ನಿಸುತ್ತಿದ್ದ ವೇಳೆ, ಅದೇ ಮಾರ್ಗದಲ್ಲಿ ಹಿಂದಿನಿಂದ ಬರುತ್ತಿದ್ದ ಮತ್ತೊಂದು ಕಾರು ಚಾಲಕನ ನಿಯಂತ್ರಣ ತಪ್ಪಿ ನೇರವಾಗಿ ಮುಂಭಾಗದ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅಪಘಾತದ ತೀವ್ರತೆಗೆ ಕಾರಿನ ಏರ್‌ಬ್ಯಾಗ್‌ಗಳು ತೆರೆಯಲ್ಪಟ್ಟು, ವಾಹನ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಎರಡು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.
ಘಟನೆಯ ತೀವ್ರತೆಗೆ ಒಂದು ಕಾರಿನ ಹಿಂಬದಿ ಸಂಪೂರ್ಣ ಜಖಂಗೊಂಡಿದ್ದು, ಎರಡು ಟಯರ್ ಗಳು ಸಿಡಿದಿದೆ. ಮತ್ತೊಂದು ಕಾರಿನ ಚಾಲಕ ಕುಂದಾಪುರದ ನರಸಿಂಹ ಹೊಳ್ಳ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ. ಘಟನೆ ಸಂಭವಿಸುತ್ತಿದ್ದಂತೆ ಕೋಟ ಪೊಲೀಸ್ ಸ್ಥಳಕ್ಕೆ ಧಾವಿಸಿ, ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.






