ಬೆಂಗಳೂರು ದಕ್ಷಿಣದ ಮಾಗಡಿ ತಾಲ್ಲೂಕಿನ ಸಾವನದುರ್ಗದ ಸ್ವಯಂಭೂ ಲಕ್ಷ್ಮೀ ನರಸಿಂಹಸ್ವಾಮಿಗೆ ಇಂದು ನವ ನರಸಿಂಹ ವಜ್ರ ಕವಚ ಸಮರ್ಪಣೆ ನೆರವೇರಿತು. ಬೆಂಗಳೂರಿನ ಯಡಿಯೂರಿನ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಸೇವಾ ಟ್ರಸ್ಟ್ ಮತ್ತು ಅದರ ಮುಖ್ಯಸ್ಥ ಡಾ. ಶ್ರೀನಿವಾಸ ಮೂರ್ತಿ ಅವರ ಕುಟುಂಬದ ಸಹಕಾರದಲ್ಲಿ ಈ ಕಾರ್ಯಕ್ರಮ ಅದ್ಧೂರಿಯಾಗಿ ಆಯೋಜಿಸಲಾಗಿತ್ತು.
ಮುಂಜಾನೆ ೪ ಗಂಟೆಗೆ ಪಟ್ಟನಾಯಕನಹಳ್ಳಿಯ ಗುರುಗುಂಡೇಶ್ವರ ಮಠದ ಪೀಠಾಧೀಶ ಶ್ರೀ ಶ್ರೀ ಶ್ರೀ ನಂಜಾವಧಾತ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಗಣಪತಿ ಹೋಮ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಂಗ್ರೆಸ್ ಹಿರಿಯ ನಾಯಕ ಕೆ.ಎಂ. ನಾಗರಾಜ್ ವಹಿಸಿದ್ದರು.
ಕಾರ್ಯಕ್ರಮಕ್ಕೆ ಹಿರಿಯ ರಾಜಕೀಯ ನಾಯಕರುಗಳಾದ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರು, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರು, ಕೇಂದ್ರ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಸಾರಿಗೆ ಸಚಿವ ರಾಮಲಿಂಗರೆಡ್ಡಿ , ಮಾಗಡಿಯ ಶಾಸಕ ಬಾಲಕೃಷ್ಣ, ಸಂಸದ ಡಾ. ಮಂಜುನಾಥ್, ಮಾಜಿ ಸಚಿವ ಹೆಚ್.ಎಂ. ರೇವಣ್ಣ, ಸಚಿವ ಟಿ.ಬಿ. ಜಯಚಂದ್ರ, ಜೆ ಡಿ ಎಸ್ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ ಗೌಡ, ವಿಜಯಪುರದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮೋಹನ್, ಅಂತರ್ ರಾಜ್ಯ ನೃತ್ಯಗಾರ ಡಾ. ಸತ್ಯನಾರಾಯಣ ರಾಜು ಮತ್ತು ಅಪಾರ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸ್ವಾಮಿಯ ಕೃಪೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಶ್ರೀ ಶ್ರೀ ನಂಜಾವಧಾತ ಸ್ವಾಮೀಜಿಗಳು ಬಹಳ ಹಿಂದಿನಂದಲೂ ಡಾ. ಶ್ರೀನಿವಾಸ ಮೂರ್ತಿ ಯವರ ಕುಟುಂಬ ದೇವತಾ ಕಾರ್ಯಗಳನ್ನು ನಡೆಸಿಕೊಂಡು ಬಂದಿರುತ್ತಾರೆ. ಆ ದೇವರ ಅನುಗ್ರಹ ಎಲ್ಲರ ಮೇಲಿರಲಿ. ಸರ್ಕಾರ ಸಾವನದುರ್ಗ ಕ್ಷೇತ್ರದಲ್ಲಿ ಹೆಚ್ಚಿನ ಅನುಕೂಲಗಳನ್ನು ಒದಗಿಸಿ ಪ್ರವಾಸೋದ್ಯಮಕ್ಕೆ ಅನುಕೂಲ ಮಾಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯಕ್ರಮದ ಮುಖ್ಯಸ್ಥ ಡಾ. ಶ್ರೀನಿವಾಸ ಮೂರ್ತಿ ‘ಸಾವನದುರ್ಗವು ಅತ್ಯಂತ ಪವಿತ್ರವಾದ ಕ್ಷೇತ್ರವಾಗಿದ್ದು, ಈ ಕ್ಷೇತ್ರ ಕೆಂಪೇಗೌಡರ ಕಾಲದಿಂದಲೂ ಪ್ರಸಿದ್ದವಾದ ಪುಣ್ಯ ಕ್ಷೇತ್ರ. ಇದು ನನ್ನೊಬ್ಬನಿಂದಾದ ಕಾರ್ಯವಲ್ಲ. ಸ್ವಾಮಿಯ ಕೃಪೆಯಿಂದ ಇಂದು ಇದು ಸಾಧ್ಯವಾಗಿದೆ. ಇದಕ್ಕೆ ಹಲವಾರು ಹಲವಾರು ರೀತಿಯ ಸಹಾಯ ಮಾಡಿ ಸ್ವಾಮಿಗೆ ವಜ್ರ ಕವಚವನ್ನು ಅರ್ಪಿಸಿದಂತಾಗಿದೆ’ ಎಂದರು.






