ಕಾರ್ಕಳ ಜ. 28:ಕರಾವಳಿಯಲ್ಲಿ ಪೇರಳೆಗಳನ್ನು ವ್ಯಾಪಕವಾಗಿ ವಾಣಿಜ್ಯ ರೀತಿಯಲ್ಲಿ ಬೆಳೆಯುವುದು ಅಪರೂಪ. ಆದರೆ ಕಾರ್ಕಳ ತಾಲ್ಲೂಕಿನ ಇನ್ನಾ ಗ್ರಾಮದಲ್ಲಿನ ಕೆಲ ರೈತರು ಈ ಅಪರೂಪದ ಪ್ರಯತ್ನವನ್ನು ಮಾಡುತ್ತಿದ್ದಾರೆ. ಪೇರಳೆಗಳಿಗೆ ಈ ಪ್ರದೇಶದ ಹೆಚ್ಚು ಮಳೆಯ ಹವಾಮಾನ ಸರಿಹೊಂದುವುದಿಲ್ಲ. ಆದರೂ ಹವಾಮಾನದ ಸವಾಲುಗಳನ್ನು ಎದುರಿಸುತ್ತಾ ಈ ರೈತರು ಯಶಸ್ವಿಯಾಗಿ ಕೃಷಿ ನಡೆಸುತ್ತಿದ್ದಾರೆ.
ಸುಮಾರು ಐದು ವರ್ಷಗಳ ಹಿಂದೆ ಇನ್ನಾ ಭಾಗದಲ್ಲಿ ರೈತರ ಗುಂಪು ಪ್ರಾಯೋಗಿಕವಾಗಿ ಪೇರಳೆ ಬೆಳೆಯನ್ನು ಆರಂಭಿಸಿತ್ತು. ಈಗ ಸುಮಾರು 8–10 ರೈತರು ಸುಮಾರು 5 ಎಕರೆ ಪ್ರದೇಶದಲ್ಲಿ ಪೇರಳೆ ಬೆಳೆಸುತ್ತಿದ್ದಾರೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳಿಂದ ಅಭಿವೃದ್ಧಿಪಡಿಸಿದ ‘ಅರ್ಕ ಕಿರಣ’ ತಳಿಯನ್ನು ಇಲ್ಲಿ ಹತ್ತಿರದಿಂದ ಬೆಳೆಸಲಾಗಿದೆ.
ತೋಟಗಾರಿಕಾ ಇಲಾಖೆಯ ಸಬ್ಸಿಡಿ ಸೌಲಭ್ಯ ಹಾಗೂ ಹನಿ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿಕೊಂಡು ವೈಜ್ಞಾನಿಕವಾಗಿ ಕೃಷಿ ಮಾಡಲಾಗುತ್ತಿದೆ. ಆದರೆ, ನಿರೀಕ್ಷಿತವಾದ ಬೆಳೆ ಮತ್ತು ಲಾಭ ಬರುತ್ತಿಲ್ಲ. ಮಾರುಕಟ್ಟೆಯಲ್ಲಿಯೂ ಬೇಡಿಕೆ ಇದ್ದರೂ ಬೆಳೆಗಾರರ ಶ್ರಮಕ್ಕೆ ತಕ್ಕ ಬೆಲೆ ಸಿಗಲೂ ಕಷ್ಟವಾಗುತ್ತಿದೆ ಎನ್ನುವುದು ರೈತರ ಅಸಮಾಧಾನ.
ಪೇರಳೆ ಕೃಷಿಯನ್ನು ಒಬ್ಬರೇ ಮಾಡುವುದು ಕಷ್ಟಕರ. ಎಂಟತ್ತು ಮಂದಿ ರೈತರು ಸೇರಿ ಗುಂಪು ಕೃಷಿ ಮಾಡುವುದರಿಂದ ಸರಕಾರಿ ಸಬ್ಸಿಡಿ ಪಡೆಯಲು ಸುಲಭವಾಗುತ್ತದೆ ಮತ್ತು ಮಾರುಕಟ್ಟೆ ವ್ಯವಸ್ಥೆಗೂ ಅನುಕೂಲವಾಗುತ್ತದೆ. ಈ ಭಾಗದ ಹವಾಮಾನಕ್ಕೆ ಪೇರಳೆ ಅಷ್ಟಾಗಿ ಹೊಂದುವುದಿಲ್ಲವಾದರೂ, ರೈತರ ಆಸಕ್ತಿ ಮತ್ತು ಸೂಕ್ತ ನಿರ್ವಹಣೆಯಿಂದ ಕೆಲವರಿಂದ ಉತ್ತಮ ಬೆಳೆ ತೆಗೆಯಲು ಸಾಧ್ಯವಾಗಿದೆ ಎಂದು ಕೃಷಿಕ, ಕಂಜಾರಕಟ್ಟೆಯ ದೀಪಕ್ ಕಾಮತ್ ತಿಳಿಸಿದ್ದಾರೆ.
ಪೇರಳೆ ಪೌಷ್ಟಿಕಾಂಶದ ಗಣಿ
ಪೇರಳೆಯ ಅರ್ಕ ಕಿರಣ ತಳಿಯು ಹೇರಳವಾದ ಪೌಷ್ಟಿಕಾಂಶ ಹೊಂದಿದೆ. ಅತ್ಯಂತ ರುಚಿಕರವಾಗಿದೆ. ಇದರ ಹೊರಪದರ ಅತ್ಯಂತ ಮೃದುವಾಗಿದೆ. ಈ ಪೇರಳೆಯನ್ನು ಗ್ರಾಹಕರಿಗೆ ನೇರವಾಗಿ ಇನ್ನಾ ಭಾಗದ ರೈತರಿಂದಲೇ ಖರೀದಿಸಲು ಅವಕಾಶವಿದೆ. ಇದನ್ನು ಹಿಂದೆ ಸಂಯೋಜಿತ ಬೆಳೆಯಾಗಿ ಬೆಳೆಸಲಾಗುತ್ತಿತ್ತು, ಆದರೆ ಈಗ ಪ್ರತ್ಯೇಕವಾಗಿಯೂ ಬೆಳೆಯಲಾಗುತ್ತಿದೆ. ತಿನ್ನಲೂ ಮಾತ್ರವಲ್ಲ ಐಸ್‌ಕ್ರೀಂ, ಜ್ಯೂಸ್, ಜಾಮ್‌ಗೆ ಬಳಕೆ ಮಾಡಲಾಗುತ್ತದೆ ಎಂದು ಕೃಷಿಕರು ತಿಳಿಸಿದ್ದಾರೆ.
ವರ್ಷಕ್ಕೆ ಎರಡು ಬೆಳೆ ಮಾತ್ರ
ಬೆಂಗಳೂರು ಮತ್ತು ಘಟ್ಟ ಪ್ರದೇಶದಲ್ಲಿ ಪೇರಳೆಯಲ್ಲಿ ವರ್ಷಕ್ಕೆ ಮೂರು ಬೆಳೆ ತೆಗೆಯಲಾಗುತ್ತದೆ. ಕರಾವಳಿಯ ಮಳೆಯ ಸವಾಲಿನ ನಡುವೆಯೂ ಇಲ್ಲಿನ ರೈತರು ವರ್ಷಕ್ಕೆ ಎರಡು ಬೆಳೆ (ಮಳೆಗೆ ಮೊದಲು ಮತ್ತು ಮಳೆಯ ನಂತರ) ಪಡೆಯುತ್ತಿದ್ದಾರೆ. ಇಳುವರಿ ಒಮ್ಮೊಮ್ಮೆ ಕೈ ಕೊಡುತ್ತದೆ, ಒಮ್ಮೆ ಉತ್ತಮವಾಗಿರುತ್ತದೆ. ಆರಂಭದಲ್ಲಿ ತೋಟಗಾರಿಕೆ ಇಲಾಖೆಯಿಂದ ಸಬ್ಸಿಡಿ ನೆರವು ನೀಡಲಾಗಿತ್ತು.
– ಶ್ರೀನಿವಾಸ್, ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಕಾರ್ಕ






