ಮಂಗಳೂರು ಜ. 27 : ಬಾಗಲಕೋಟೆಯಿಂದ ಉದ್ಯೋಗದ ನಿರೀಕ್ಷೆಯೊಂದಿಗೆ ಮಂಗಳೂರಿಗೆ ಬಂದಿದ್ದ ಯುವಕನೊಬ್ಬ ಕೆಲಸ ದೊರೆಯದೆ ನಿರಾಶನಾಗಿ, ನಗರದ ಕರಂಗಲಪಾಡಿ ಪ್ರದೇಶದಲ್ಲಿ ಸೋಮವಾರ ಸುಮಾರು 50 ಅಡಿ ಎತ್ತರದ ಮರದ ಮೇಲೆ ಹತ್ತಿ ಕುಳಿತ ಘಟನೆ ನಡೆದಿದೆ.
ಬಾಗಲಕೋಟೆ ಹುನಗುಂದ ನಿವಾಸಿ ಭೀಮಪ್ಪ ತಳವಾರ್ (24) ಮರವೇರಿದ ವ್ಯಕ್ತಿ. ಈತನ ಊರಿನವರು ಮಂಗಳೂರಿನಲ್ಲಿ ಕೆಲಸಕ್ಕಿದ್ದು, ಅವರ ಜತೆ ಕೆಲಸ ಸಿಗಬಹುದು ಎಂಬ ಕಾರಣಕ್ಕೆ ಮಂಗಳೂರಿಗೆ ಆಗಮಿಸಿದ್ದ. ಇಲ್ಲಿಗೆ ಬಂದು ತಮ್ಮ ಪರಿಚಿತರನ್ನು ಸಂಪರ್ಕಿಸಿದಾಗ ಅವರು ಅದಾಗಲೇ ಮರಳಿ ಊರಿಗೆ ತೆರಳಿ ಆಗಿತ್ತು. ಇದರಿಂದ ಬೇಸತ್ತು ಕೆಲಸವೂ ಇಲ್ಲದೆ ಮರ ಹತ್ತಿ ತುದಿಯಲ್ಲಿ ಕುಳಿತಿದ್ದ.
ಸ್ಥಳೀಯರು ಆತನನ್ನು ಕೆಳಗಿಳಿಸಲು ಹರಸಾಹಸ ಪಟ್ಟರೂ ಸಾಧ್ಯವಾಗಲಿಲ್ಲ. ಕೊನೆಗೆ ಕದ್ರಿ ಪೊಲೀಸರು ಆಗಮಿಸಿ ಯುವಕನ ಮನವೊಲಿಸಿ ಕೆಳಗಿಳಿಸಿ ಬಾಗಲಕೋಟೆಗೆ ಕಳುಹಿಸಿಕೊಟ್ಟರು.






