ಮಂಗಳೂರು, ಜನವರಿ 27: ಸಾಧನೆಗೆ ಅಂಗವೈಕಲ್ಯ ಎಂದೂ ಅಡ್ಡಿಯಾಗುವುದಿಲ್ಲ ಎಂಬುದನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಬೀರ್ ಎಂಬ ಯುವಕ ತನ್ನ ಜೀವನದ ಮೂಲಕ ಸಾಬೀತುಪಡಿಸಿದ್ದಾರೆ. ಅಬ್ಬಾಸ್–ಅಮೀನಾ ದಂಪತಿಯ ಪುತ್ರರಾದ ಕಬೀರ್, ಒಂಭತ್ತು ತಿಂಗಳ ವಯಸ್ಸಿನಲ್ಲಿ ಜ್ವರದಿಂದ ದೇಹದ ಸ್ವಾಧೀನ ಕಳೆದುಕೊಂಡಿದ್ದರು.
ಪ್ರಸ್ತುತ 25 ವರ್ಷ ವಯಸ್ಸಿನ ಕಬೀರ್, ಕುತ್ತಿಗೆಯ ಮೇಲ್ಭಾಗ ಹಾಗೂ ಹೆಬ್ಬೆರಳಿನಲ್ಲಿ ಮಾತ್ರ ಚಲನೆಯ ಸಾಮರ್ಥ್ಯ ಹೊಂದಿದ್ದಾರೆ. ಆದರೆ ಇದೇ ಹೆಬ್ಬೆರಳಿನ ಸಹಾಯದಿಂದ ಮೊಬೈಲ್‌ನಲ್ಲಿ ಫೋಟೋ ಎಡಿಟಿಂಗ್, ವಿಡಿಯೋ ಎಡಿಟಿಂಗ್ ಕೌಶಲ್ಯಗಳನ್ನು ಕಲಿತಿದ್ದಾರೆ. ಯೂಟ್ಯೂಬ್ ಮೂಲಕ ಸ್ವಯಂ ಅಧ್ಯಯನ ನಡೆಸಿದ ಅವರು, ಇಂದು ಆನ್‌ಲೈನ್ ವ್ಯವಹಾರದಲ್ಲಿ ಯಶಸ್ವಿಯಾಗಿ ತೊಡಗಿಸಿಕೊಂಡಿದ್ದಾರೆ.
ಆನ್‌ಲೈನ್ ಶಾಪ್, ಟ್ರಾವೆಲ್ಸ್, ಫೋಟೋಶೂಟ್, ಈವೆಂಟ್ ಡೆಕೋರ್, ವೆಡ್ಡಿಂಗ್ ಪ್ಲಾನಿಂಗ್ ಹಾಗೂ ಕ್ರಾಫ್ಟ್ ಐಟಂಗಳಂತಹ ವಿವಿಧ ವ್ಯವಹಾರಗಳನ್ನು ನಿರ್ವಹಿಸುತ್ತಿರುವ ಕಬೀರ್, ಆಸಕ್ತಿ ಮತ್ತು ದೃಢಸಂಕಲ್ಪ ಇದ್ದರೆ ಯಾವುದನ್ನೂ ಕಲಿಯಲು ಸಾಧ್ಯ ಎಂದು ಹೇಳುತ್ತಾರೆ.
ಸ್ವಂತ ದುಡಿಮೆಯಿಂದ ಹೊಸ ಕಾರು ಖರೀದಿಸುವ ಮೂಲಕ ಮತ್ತೊಂದು ಸಾಧನೆ ಮಾಡಿರುವ ಕಬೀರ್, ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ದೊಡ್ಡ ಶಾಪ್ ತೆರೆಯುವ ಗುರಿಯನ್ನು ಹೊಂದಿದ್ದಾರೆ.






