ಮಲ್ಪೆ ಜ. 26 : ಸೋಮವಾರ ಬೆಳಿಗ್ಗೆ ಕೋಡಿಬೆಂಗ್ರೆ ಬೀಚ್ ಸಮೀಪ ಪ್ರವಾಸಿಗರನ್ನು ಸಮುದ್ರ ವಿಹಾರಕ್ಕೆ ಕರೆದೊಯ್ಯುತ್ತಿದ್ದ ದೋಣಿ ಪಲ್ಟಿಯಾಗಿದ್ದು, ಅದರ ಪರಿಣಾಮವಾಗಿ ಇಬ್ಬರು ಗಂಭೀರ ಸ್ಥಿತಿಗೆ ತಲುಪಿದ್ದು, ಇನ್ನೂ ಹಲವು ಮಂದಿ ಅಸ್ವಸ್ಥಗೊಂಡಿದ್ದಾರೆ.
ರೆಸಾರ್ಟ್‌ನಲ್ಲಿ ತಂಗಿದ್ದ ಪ್ರವಾಸಿಗರನ್ನು ದೋಣಿಯ ಮೂಲಕ ಸಮುದ್ರ ವಿಹಾರಕ್ಕೆ ಕರೆದುಕೊಂಡು ಹೋಗಲಾಗಿದ್ದು, ದೋಣಿಯಲ್ಲಿ ಸುಮಾರು 10 ಮಂದಿ ಇದ್ದರು. ಆದರೆ ಯಾವುದೇ ಪ್ರವಾಸಿಗರು ಲೈಫ್ ಜಾಕೆಟ್ ಧರಿಸಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ನೀರಿನ ಮೇಲೆ ದೋಣಿ ಅಕಸ್ಮಿಕವಾಗಿ ಪಲ್ಟಿಯಾಗಿದ್ದು, ಎಲ್ಲ ಪ್ರವಾಸಿಗರು ನೀರಿಗೆ ಬಿದ್ದರೆಂದು ತಿಳಿದುಬಂದಿದೆ. ಇದರಲ್ಲಿ ಹಲವು ಮಂದಿಯನ್ನು ರಕ್ಷಿಸಲಾಗಿದೆ. ಆದರೆ ನಾಲ್ವರು ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಇಬ್ಬರು ಗಂಭೀರ ಸ್ಥಿತಿಯಲ್ಲಿ ಖಾಸಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಸ್ಥಳಕ್ಕೆ ಮಲ್ಪೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ.






