ಮಣಿಪಾಲ್, ಜನವರಿ 26, 2026: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ವಿಶ್ವವಿದ್ಯಾಲಯ ಎಂದು ಪರಿಗಣಿತವಾದ ಉತ್ಕೃಷ್ಟ ಸಂಸ್ಥೆ, ಸೋಮವಾರ 77ನೇ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿತು.
ಮಾಹೆ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಮಾಹೆ ಸಹಕುಲಾಧಿಪತಿ ಡಾ| ಎಚ್. ಎಸ್. ಬಲ್ಲಾಳ್ ಅವರು ರಾಷ್ಟ್ರಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ನಡೆದ ಸಾಮೂಹಿಕ ರಾಷ್ಟ್ರಗೀತೆ ಗಾಯನ ಹಾಗೂ ವಿದ್ಯಾರ್ಥಿಗಳ ಶಿಸ್ತುಬದ್ಧ ಕವಾಯತು ನೋಡುಗರ ಕಣ್ಮನ ಸೆಳೆಯಿತಲ್ಲದೆ, ನೆರೆದಿದ್ದವರಲ್ಲಿ ದೇಶಾಭಿಮಾನವನ್ನು ಇಮ್ಮಡಿಗೊಳಿಸಿತು. ಬೋಧಕರು, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಮತ್ತು ಎನ್‌ಸಿಸಿ ಕೆಡೆಟ್‌ಗಳು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಏಕತೆ ಮತ್ತು ರಾಷ್ಟ್ರೀಯ ಜವಾಬ್ದಾರಿ ಪ್ರಜ್ಞೆಯನ್ನು ಪ್ರದರ್ಶಿಸಿದರು.
ಗಣರಾಜ್ಯೋತ್ಸವದ ಸಂದೇಶ ನೀಡಿದ ಮಾಹೆ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ) ಎಂ.ಡಿ. ವೆಂಕಟೇಶ್ (ನಿವೃತ್ತ), ʼಯುವಜನತೆ ಶಿಸ್ತು, ನೈತಿಕ ನಾಯಕತ್ವ ಹಾಗೂ ರಾಷ್ಟ್ರಸೇವೆಯ ಮನೋಭಾವವನ್ನು ಮೈಗೂಡಿಸಿಕೊಳ್ಳಬೇಕು. ಶಿಕ್ಷಣವು ಕೇವಲ ತರಗತಿ ಕೋಣೆಗಳಿಗೆ ಸೀಮಿತವಾಗದೆ, ಸಮಾಜ ಮತ್ತು ದೇಶದ ಬಗ್ಗೆ ಆಳವಾದ ಜವಾಬ್ದಾರಿಯನ್ನು ಪ್ರೇರೇಪಿಸುವಂತಿರಬೇಕು. ಭಾರತದ ಸಂವಿಧಾನವು ‘ವಿವಿಧತೆಯಲ್ಲಿ ಏಕತೆ’ಗೆ ಸಾಕ್ಷಿಯಾಗಿದೆ. ಮಾಹೆಯಲ್ಲಿ, ವಿದ್ಯಾರ್ಥಿಗಳು ಈ ಮೌಲ್ಯಗಳನ್ನು ಎತ್ತಿಹಿಡಿಯಲು ಮತ್ತು ಉತ್ತಮ ಧ್ಯೇಯದೊಂದಿಗೆ ಮುನ್ನಡೆಯುವಂತಹ ಶೈಕ್ಷಣಿಕ ವಾತಾವರಣವನ್ನು ರೂಪಿಸಲು ನಾವು ಶ್ರಮಿಸುತ್ತಿದ್ದೇವೆʼ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮಾಹೆಯ ಗಣ್ಯ ನಾಯಕರು ಉಪಸ್ಥಿತರಿದ್ದು, ಈ ದಿನದ ಮಹತ್ವವನ್ನು ಸಾರಿದರು. ಸಹ ಕುಲಪತಿ ಡಾ. ಎಚ್.ಎಸ್. ಬಲ್ಲಾಳ್, ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ) ಎಂ.ಡಿ. ವೆಂಕಟೇಶ್, ಡಾ. ನಾರಾಯಣ ಸಭಾಹಿತ್, ಉಪ ಕುಲಪತಿ (ಆರೋಗ್ಯ ವಿಜ್ಞಾನ) ಡಾ. ಶರತ್ ರಾವ್, ಕುಲಸಚಿವರಾದ ಡಾ. ಪಿ. ಗಿರಿಧರ್ ಕಿಣಿ, ಮೌಲ್ಯಮಾಪನ ಕುಲಸಚಿವರಾದ ಡಾ. ವಿನೋದ್ ವಿ. ಥಾಮಸ್, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ. ಆನಂದ್ ವೇಣುಗೋಪಾಲ್ ಹಾಗೂ ಮಾಹೆಯ ವಿವಿಧ ಘಟಕಗಳ ಮುಖ್ಯಸ್ಥರು ಮತ್ತು ಬೋಧಕರು ಪಾಲ್ಗೊಂಡಿದ್ದರು. ಇವರ ಉಪಸ್ಥಿತಿಯು ರಾಷ್ಟ್ರೀಯ ಮೌಲ್ಯಗಳು ಮತ್ತು ಶೈಕ್ಷಣಿಕ ಶ್ರೇಷ್ಠತೆಯನ್ನು ಎತ್ತಿಹಿಡಿಯುವಲ್ಲಿ ಸಾಮೂಹಿಕ ನಾಯಕತ್ವದ ಬದ್ಧತೆಯನ್ನು ಪ್ರತಿಬಿಂಬಿಸಿತು.
ಮಾಹೆಯ ಆಶ್ರಯದಲ್ಲಿ, ಮಣಿಪಾಲದ ವೆಲ್ಕಮ್‌ಗ್ರೂಪ್ ಗ್ರಾಜುಯೇಟ್ ಸ್ಕೂಲ್ ಆಫ್ ಹೋಟೆಲ್ ಅಡ್ಮಿನಿಸ್ಟ್ರೇಷನ್ (WGSHA) ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.
ನಮ್ಮ ಸಂವಿಧಾನದ ಮೌಲ್ಯಗಳನ್ನು ಗೌರವಿಸುವುದು, ಶಿಸ್ತು, ನಾಯಕತ್ವ, ಒಳಗೊಳ್ಳುವಿಕೆ ಮತ್ತು ರಾಷ್ಟ್ರ ಸೇವೆಯ ಕಡೆಗಿನ ಸಂಸ್ಥೆಯ ಬದ್ಧತೆಯನ್ನು ಬಲಪಡಿಸುವುದು ಈ ಆಚರಣೆಯ ಪ್ರಮುಖ ಉದ್ದೇಶವಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವಿದ್ಯಾರ್ಥಿಗಳ ಭಾಗವಹಿಸುವಿಕೆಯು ವೈವಿಧ್ಯತೆ ಹಾಗೂ ಪ್ರಜಾಪ್ರಭುತ್ವದ ತತ್ವಗಳನ್ನು ಎತ್ತಿ ಹಿಡಿಯಿತು.
ಪಥಸಂಚಲನದಲ್ಲಿ ಕಸ್ತೂರ್ಬಾ ಮೆಡಿಕಲ್ ಕಾಲೇಜು, ಮಣಿಪಾಲ ತಂಡವು ಪ್ರಥಮ ಸ್ಥಾನವನ್ನು ಗಳಿಸಿತು. ವೆಲ್ಕಂಗ್ರೂಪ್ ಆಫ್ ಹೊಟೇಲ್ ಅಡ್ಮಿನ್ಸ್ಟೇಷನ್ ತಂಡವು ದ್ವಿತೀಯ ಹಾಗೂ ಮಣಿಪಾಲ ಕಾಲೇಜು ಆಫ್ ಹೆಲ್ತ್ ಪ್ರೋಫೆಷನಲ್ಸ್ ತಂಡವು ತೃತೀಯ ಪ್ರಶಸ್ತಿಯನ್ನು ಪಡೆದುಕೊಂಡಿತು.
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಬಗ್ಗೆ:
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾದ ಉತ್ಕೃಷ್ಟ ಸಂಸ್ಥೆ. ಮಣಿಪಾಲ್, ಮಂಗಳೂರು, ಬೆಂಗಳೂರು, ಜಮ್ಶೆಡ್‌ಪುರ ಮತ್ತು ದುಬೈನಲ್ಲಿರುವ ತನ್ನ ಕ್ಯಾಂಪಸ್‍ಗಳನ್ನು ಹೊಂದಿದೆ. ಹೆಲ್ತ್ ಸೈನ್ಸ್, ಮ್ಯಾನೇಜ್‌ಮೆಂಟ್, ಕಾನೂನು, ಮಾನವಿಕ ಮತ್ತು ತಾಂತ್ರಿಕ ವಿಜ್ಞಾನ ಸೇರಿದಂತೆ 400ಕ್ಕೂ ಹೆಚ್ಚು ವಿಷಯಗಳಲ್ಲಿ ಅಧ್ಯಯನಕ್ಕೆ ಅವಕಾಶ ಕಲ್ಪಿಸಿದೆ. ಅತ್ಯುತ್ತಮ ಶೈಕ್ಷಣಿಕ ದಾಖಲೆ, ಅತ್ಯಾಧುನಿಕ ಮೂಲಸೌಕರ್ಯ ಹಾಗೂ ಸಂಶೋಧನಾ ಕ್ಷೇತ್ರಕ್ಕೆ ನೀಡಿದ ಅನನ್ಯ ಕೊಡುಗೆಯಿಂದಾಗಿ ಮಾಹೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿದೆ. ಅಕ್ಟೋಬರ್ 2020ರಲ್ಲಿ ಭಾರತ ಸರ್ಕಾರದ ಶಿಕ್ಷಣ ಸಚಿವಾಲಯವು ಮಾಹೆಗೆ ಪ್ರತಿಷ್ಠಿತ ‘ಇನ್‌ಸ್ಟಿಟ್ಯೂಷನ್ ಆಫ್ ಎಮಿನೆನ್ಸ್’ ಸ್ಥಾನಮಾನ ನೀಡಿ ಗೌರವಿಸಿದೆ. ಪ್ರಸ್ತುತ ಎನ್‌ಐಆರ್‌ಎಫ್ (NIRF) ರ‍್ಯಾಂಕಿಂಗ್‌ನಲ್ಲಿ ಮಾಹೆ 3ನೇ ಸ್ಥಾನದಲ್ಲಿದೆ. ಪರಿವರ್ತನಾಶೀಲ ಕಲಿಕೆ ಮತ್ತು ಅತ್ಯತ್ತಮ ಕ್ಯಾಂಪಸ್ ಜೀವನವನ್ನು ಬಯಸುವ ವಿದ್ಯಾರ್ಥಿಗಳಿಗೆ ಹಾಗೂ ಅತ್ಯುತ್ತಮ ಪ್ರತಿಭೆಗಳನ್ನು ಹುಡುಕುತ್ತಿರುವ ಬಹುರಾಷ್ಟ್ರೀಯ ಕಂಪನಿಗಳಿಗೆ ಮಾಹೆ ಒಂದು ಅಚ್ಚುಮೆಚ್ಚಿನ ತಾಣವಾಗಿದೆ.






