ಮಂಗಳೂರು, ಜನವರಿ 25:ನಗರದ ಹೃದಯಭಾಗದ ಮಹಾವೀರ ವೃತ್ತದಲ್ಲಿ ವಿವಿಧ ಪ್ರದೇಶಗಳಿಂದ ಜಿಲ್ಲೆಗೆ ಆಗಮಿಸುವ ಜನರು ಹಾಗೂ ವಾಹನಗಳಿಗೆ ಶುಭಾಶಯ ಕೋರುವ ಸಂಕೇತವಾಗಿ ಕಳಶವನ್ನು ಸ್ಥಾಪಿಸಲಾಗಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಮಂಗಳೂರು ಜೈನ್ ಸೊಸೈಟಿಯ ಮುಂದಾಳತ್ವದಲ್ಲಿ ನಿರ್ಮಾಣಗೊಂಡ ನವೀಕೃತ ಮಹಾವೀರ ವೃತ್ತವನ್ನು ಶನಿವಾರ ಲೋಕಾರ್ಪಣೆಗೊಳಿಸಿ, ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
2002ರಲ್ಲಿ ಸರ್ಕಾರದ ವತಿಯಿಂದ ಮಹಾವೀರ ಜಯಂತಿ ಆಚರಣೆ ಜಾರಿಗೆ ಬಂದ ಸಂದರ್ಭದಲ್ಲಿ ಜೈನ ತೀರ್ಥಂಕರ ಮಹಾವೀರ ಸ್ವಾಮಿಯ ಸ್ಮರಣಾರ್ಥವಾಗಿ ಶಾಶ್ವತ ಕಾರ್ಯವೊಂದನ್ನು ಕೈಗೊಳ್ಳುವ ನಿರ್ಧಾರ ಕೈಗೊಳ್ಳಲಾಯಿತು. ಮೂರ್ತಿ ಸ್ಥಾಪನೆಯಿಂದ ಸಂಘರ್ಷ ಉಂಟಾಗುವ ಸಾಧ್ಯತೆ ಇರುವುದನ್ನು ಮನಗಂಡು, ಶಾಂತಿಯ ಸಂಕೇತವಾಗಿ ಕಳಶವನ್ನು ನಿರ್ಮಿಸಲಾಗಿದೆ ಎಂದು ಅವರು ವಿವರಿಸಿದರು.
ಕಳಶವು ಶುಭದ ಸಂಕೇತವಾಗಿದ್ದು, ಮಂಗಳಕಾರ್ಯಗಳಲ್ಲಿ ಪ್ರಮುಖ ಸ್ಥಾನ ಹೊಂದಿದೆ. ಇಲ್ಲಿ ಸ್ಥಾಪಿಸಲಾದ ಕಳಶವು ಈ ಪ್ರದೇಶಕ್ಕೆ ಬರುವ ಜನರಿಗೆ ಶುಭಾರಂಭ, ಸ್ವಾಗತ ಹಾಗೂ ಶುಭವಿದಾಯ ಕೋರುವ ಅರ್ಥವನ್ನು ಹೊತ್ತಿದೆ ಎಂದು ಡಾ. ಹೆಗ್ಗಡೆ ಹೇಳಿದರು.
ಮಹಾವೀರ ವೃತ್ತದ ನಾಮಫಲಕವನ್ನು ಅನಾವರಣಗೊಳಿಸಿದ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಮಾತನಾಡಿ, ಮಹಾವೀರ ವೃತ್ತದಲ್ಲಿರುವ ಕಳಶವು ತುಳುನಾಡಿನ ಸಂಸ್ಕೃತಿ, ಪರಂಪರೆ ಹಾಗೂ ಇಲ್ಲಿನ ಜನರ ಸ್ವಾಭಿಮಾನವನ್ನು ಪ್ರತಿಬಿಂಬಿಸುವ ಪ್ರತೀಕವಾಗಿ ನಿಂತಿದೆ ಎಂದರು.
ಸಂಸದ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿ, ‘ಮಂಗಳೂರು 2.0’ ಮತ್ತು ಹೊಸ ಮಂಗಳೂರು ನಿರ್ಮಾಣದ ಪರಿಕಲ್ಪನೆಗೆ ನವೀಕೃತ ಕಳಶವು ಮುನ್ನುಡಿ ಬರೆಯಲಿ. ನನ್ನ ‘ಬ್ಯಾಕ್ ಟು ಊರು’ ಯೋಜನೆಗೆ ಅನುಗುಣವಾಗಿ ದೇಶ-ವಿದೇಶದಲ್ಲಿರುವ ತುಳುನಾಡಿನ ಜನರು ತಾಯ್ನಾಡಿಗೆ ಮರಳಿ ಅಭಿವೃದ್ಧಿ ಕಾರ್ಯಗಳಲ್ಲಿ ಪಾಲ್ಗೊಳ್ಳುವಂತಾಗಲಿ ಎಂದು ಆಶಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಪಾಲಿಕೆ ಮಾಜಿ ಸದಸ್ಯ ಸಂದೀಪ್ ಗರೋಡಿ, ಮುಡಾ ಮಾಜಿ ಅಧ್ಯಕ್ಷ ಸುರೇಶ್ ಬಲ್ಲಾಳ್ ಉಪಸ್ಥಿತರಿದ್ದರು.
ಮಂಗಳೂರು ಜೈನ್ ಸೊಸೈಟಿ ಅಧ್ಯಕ್ಷ ಪುಷ್ಟರಾಜ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮನೋಜ್ ವಾಮಂಜೂರು ಕಾರ್ಯಕ್ರಮ ನಿರೂಪಿಸಿದರು. ಸಚಿನ್ ಕುಮಾರ್ ಜೈನ್ ವಂದಿಸಿದರು. ವೃತ್ತ ನಿರ್ಮಾಣಕ್ಕೆ ಸಹಕರಿಸಿದವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ನವೀಕೃತ ಮಹಾವೀರ ವೃತ್ತದಲ್ಲಿ ಸ್ಥಾಪಿಸಲಾದ ಕಳಶವು ಸುಮಾರು 22 ಟನ್ ತೂಕ ಹೊಂದಿದ್ದು, 30 ಅಡಿ ಎತ್ತರ ಹೊಂದಿದೆ






