- ಉಡುಪಿ, ಜ.23: ಲೋಕಾಯುಕ್ತ ಅಧಿಕಾರಿಯಾಗಿ ತೋರಿಸಿಕೊಂಡು ಕರೆ ಮಾಡಿ ಉಡುಪಿ ನಗರಸಭೆ ಅಧಿಕಾರಿಯನ್ನು ವಂಚಿಸಲು ಯತ್ನಿಸಿದ ಪ್ರಕರಣ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲೆ ಮಾಡಲಾಗಿದೆ..
ಉಡುಪಿ ನಗರಸಭೆಯ ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ಕಪಿಲ್‌ದೇವ್ ಎಸ್. ಗೋಡೆಮನೆ ಅವರಿಗೆ ಜ.19ರಂದು ವಾಟ್ಸಾಪ್ ಮೂಲಕ ಅಪರಿಚಿತ ವ್ಯಕ್ತಿಯೊಬ್ಬನು ಮಂಗಳೂರು ವಿಭಾಗದ ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಚೆಲುವರಾಜ್ ಎಂದು ಹೇಳಿಕೊಂಡು ಕರೆ ಮಾಡಿದ್ದನು.
ನಿಮ್ಮ ವಿರುದ್ಧ ಇ-ಮೇಲ್ ಮೂಲಕ ದೂರು ಬಂದಿದ್ದು, ಈ ದೂರನ್ನು ಬಗೆಹರಿಸಿಕೊಳ್ಳದಿದ್ದರೆ ನಿಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತದೆ ಹಾಗೂ ಇಲಾಖಾ ವಿಚಾರಣೆ ನಡೆಸಲಾಗುತ್ತದೆ ಎಂದು ಬೆದರಿಕೆ ಹಾಕಿದ್ದನು. ಬಳಿಕ ಮತ್ತೊಬ್ಬ ವ್ಯಕ್ತಿ ಫೋನ್ ಮೂಲಕ ತಾನು ಹಿರಿಯ ಅಧಿಕಾರಿ ಎಂದು ಹೇಳಿಕೊಂಡು, ಈಗಾಗಲೇ ತಿಳಿಸಿದಂತೆ ನಡೆದುಕೊಳ್ಳದಿದ್ದರೆ ಪ್ರಕರಣ ದಾಖಲಿಸಲಾಗುತ್ತದೆ ಎಂದು ತಿಳಿಸಿದ್ದನು.
ಈ ಬಗ್ಗೆ ಅನುಮಾನಗೊಂಡ ಕಪಿಲ್‌ದೇವ್ ಉಡುಪಿ ಲೋಕಾಯುಕ್ತ ಕಚೇರಿಗೆ ಭೇಟಿ ನೀಡಿ ವಿಚಾರಿಸಿದಾಗ, ಆ ಹೆಸರಿನ ಯಾವುದೇ ಅಧಿಕಾರಿಗಳು ಅಲ್ಲಿಲ್ಲ ಮತ್ತು ಬಂದ ಕರೆಗಳು ಲೋಕಾಯುಕ್ತ ಕಚೇರಿಯಿಂದಲ್ಲ ಎಂದು ತಿಳಿಸಿದರು.
ಆದ್ದರಿಂದ ಅಪರಿಚಿತರು ವಂಚನೆ ಮಾಡಲು ಯತ್ನಿಸಿರುವುದು ದೃಢಪಟ್ಟಿದ್ದು, ಈ ಕುರಿತು ಕಪಿಲ್‌ದೇವ್ ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.






