ಬೆಂಗಳೂರು,ಜನವರಿ 20: ಡಿಜಿಪಿ ರಾಮಚಂದ್ರರಾವ್ ಅವರನ್ನು ಸರ್ಕಾರ ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಕಚೇರಿಯಲ್ಲೇ ಮಹಿಳೆ ಜೊತೆಗಿನ ರಾಸಲೀಲೆಯ ವಿಡಿಯೋ ರಾಜ್ಯಾದ್ಯಂತ ವೈರಲ್ ಆದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ. ಈ ಪ್ರಕರಣ ಕರ್ನಾಟಕ ಸರ್ಕಾರಕ್ಕೆ ತೀವ್ರ ಮುಜುಗರವನ್ನುಂಟು ಮಾಡಿತ್ತು. ವಿಡಿಯೋ ವೈರಲ್ ಆದ ಬೆನ್ನಲ್ಲೇ ಆಡಿಯೋ ಕೂಡ ಸಾರ್ವಜನಿಕವಾಗಿ ಹರಿದಾಡಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕುರಿತು ಶಿಸ್ತುಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾಕ್ಟರ್ ಎಂ.ಎಸ್. ಸಲೀಂ ಅವರಿಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮಕ್ಕಾಗಿ ಸೂಚನೆ ನೀಡಿದ್ದರು.
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಡಿಜಿಪಿ ರಾಮಚಂದ್ರರಾವ್, ಇದು ಎಐ ಸೃಷ್ಟಿ ಮತ್ತು ತಮ್ಮ ವಿರುದ್ಧದ ಷಡ್ಯಂತ್ರ ಎಂದು ಸ್ಪಷ್ಟೀಕರಣ ನೀಡಿದ್ದರು. ನಿವೃತ್ತಿಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ ಅವರನ್ನು ಅಮಾನತುಗೊಳಿಸಲಾಗಿದೆ.
ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯವು ಡಿಜಿಪಿ ಡಾ. ಕೆ. ರಾಮಚಂದ್ರ ರಾವ್ ಅವರ ವಿಡಿಯೋ ಹಾಗೂ ಆಡಿಯೋ ಸಾರ್ವಜನಿಕ ವಲಯದಲ್ಲಿ ವೈರಲ್ ಆಗಿದ್ದು, ಈ ವರ್ತನೆಯು ಸರ್ಕಾರಿ ನೌಕರನಿಗೆ ತಕ್ಕದಲ್ಲದ ಮತ್ತು ಸರ್ಕಾರಕ್ಕೆ ಮುಜುಗರ ಉಂಟುಮಾಡುವಂತಿದೆ. ಇವರ ನಡವಳಿಕೆಯು ‘ಅಖಿಲ ಭಾರತ ಸೇವೆಗಳ (ನಡತೆ) ನಿಯಮಗಳು, 1968’ರ ನಿಯಮ 3 ರ ಉಲ್ಲಂಘನೆಯಾಗಿದೆ ಎಂದು ಸರ್ಕಾರಕ್ಕೆ ಮನವರಿಕೆಯಾಗಿದೆ.
ಈ ಹಿನ್ನೆಲೆಯಲ್ಲಿ ವಿಚಾರಣೆಗಾಗಿ ಡಾ. ಕೆ. ರಾಮಚಂದ್ರ ರಾವ್ ಅವರನ್ನು ಅಮಾನತು ಮಾಡಲಾಗಿದೆ. ಅಮಾನತ್ತಿನ ಅವಧಿಯಲ್ಲಿ ಅಧಿಕಾರಿಗೆ ನಿಯಮಗಳ ಪ್ರಕಾರ ಮೂಲಭೂತ ಜೀವನ ವೆಚ್ಚ (ಸಂಬಳದ ಶೇಕಡಾವಾರು) ನೀಡಲಾಗುವುದು. ಅಮಾನತ್ತಿನ ಅವಧಿಯಲ್ಲಿ ಅಧಿಕಾರಿಯು ಸರ್ಕಾರದ ಅನುಮತಿಯಿಲ್ಲದೆ ಯಾವುದೇ ಕಾರಣಕ್ಕೂ ಕೇಂದ್ರ ಕಚೇರಿಯನ್ನು ಬಿಟ್ಟು ಹೋಗುವಂತಿಲ್ಲ ಎಂದು ಆದೇಶದ ಪ್ರತಿಯಲ್ಲಿ ತಿಳಿಸಲಾಗಿದೆ.






