ನವದೆಹಲಿ: ಜನವರಿ 16: ‘ಜನವರಿ 1ರ ನಂತರ ತಯಾರಾಗುವ ಎಲ್ಲ ದ್ವಿಚಕ್ರ ವಾಹನಗಳಿಗೆ ಆಯಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್) ಅನ್ನು ಕಡ್ಡಾಯಗೊಳಿಸಲಾಗಿದೆ’ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
2019ರಿಂದ 2023ರವರೆಗಿನ ಅವಧಿಯಲ್ಲಿ ದೇಶದಲ್ಲಿ ಸಂಭವಿಸಿದ ದ್ವಿಚಕ್ರ ವಾಹನಗಳ ಅಪಘಾತದಲ್ಲಿ 3.35 ಲಕ್ಷ ಜನರು ಮೃತಪಟ್ಟಿದ್ದಾರೆ.
ಹೀಗಾಗಿ, ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
2023ರಲ್ಲಿ ಸಂಭವಿಸಿದ ಅಪಘಾತದಲ್ಲಿ 77,539 ದ್ವಿಚಕ್ರ ವಾಹನ ಸವಾರರು ಮೃತಪಟ್ಟಿದ್ದರು. ಈ ಪೈಕಿ 50 ಸಾವಿರ ಸವಾರರು ಹೆಲ್ಮೆಟ್ ಧರಿಸಿಲ್ಲ. ದೇಶದಲ್ಲಿ ಸಂಭವಿಸುವ ಒಟ್ಟು ರಸ್ತೆ ಅಪಘಾತಗಳಲ್ಲಿ ದ್ವಿಚಕ್ರ ವಾಹನ ಅಪಘಾತಗಳಿಂದ ಉಂಟಾಗುವ ಸಾವುಗಳ ಪಾಲು 2014ರಲ್ಲಿ ಶೇ 30ರಷ್ಟಿದ್ದು 2023ರ ವೇಳೆಗೆ ಶೇ 45ಕ್ಕೆ ಏರಿದೆ.
ಹೀಗಾಗಿ, ಎಲ್ಲ ದ್ವಿಚಕ್ರ ವಾಹನಗಳಲ್ಲಿ ಆಯಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ ಕಡ್ಡಾಯ ಮಾಡಲಾಗಿದೆ ಮತ್ತು ವಾಹನ ಖರೀದಿ ವೇಳೆ ಗ್ರಾಹಕರಿಗೆ ಬಿಐಎಸ್ ಪ್ರಮಾಣೀಕೃತ ಪಡೆದ ಎರಡು ಹೆಲ್ಮೆಟ್‌ಗಳನ್ನು ನೀಡುವುದು ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಮೊದಲು 125 ಸಿಸಿ ಮೇಲ್ಪಟ್ಟ ದ್ವಿಚಕ್ರ ವಾಹನಗಳಿಗೆ ಮಾತ್ರ ಎಬಿಎಸ್ ಕಡ್ಡಾಯವಾಗಿತ್ತು.






