ಉಡುಪಿ:ಜನವರಿ 11: ಬೈಲೂರು ಉಮ್ಮಿಕಲ್ ಬೆಟ್ಟದಲ್ಲಿರುವ ಪರಶುರಾಮ್ ಥೀಮ್ ಪಾರ್ಕ್ ನ ಕಟ್ಟಡದ ಮೇಲ್ಚಾವಣಿಗೆ ಅಳವಡಿಸಿದ ತಾಮ್ರದ ಹೊದಿಕೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ಕಳವಾರು ಚಚ್೯ ಗುಡ್ಡೆಯ ಆರೀಫ್ ಯಾನೆ ಮುನ್ನ (37) ಹಾಗೂ ಮಂಗಳೂರು ಕಾವೂರಿನ ಅಬ್ದುಲ್ ಹಮೀದ್ (32) ಬಂಧಿತ ಆರೋಪಿಗಳು.
ಪ್ರಕರಣದ ಗಂಭೀರತೆ ಹಾಗೂ ಸೂಕ್ಷ್ಮತೆಯನ್ನು ಅರಿತ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರೀರಾಂ ಶಂಕರ ಆರೋಪಿಗಳ ಪತ್ತೆಗಾಗಿ ಮೂರು ವಿಶೇಷ ತಂಡಗಳನ್ನು ರಚಿಸಿದ್ದು ವಿಶೇಷ ಪೊಲೀಸ್ ತಂಡವು ಉಡುಪಿ, ದ.ಕ ಜಿಲ್ಲೆಯಲ್ಲಿ ಹಾಗೂ ಮಂಗಳೂರು ನಗರದಲ್ಲಿ ಹುಡುಕಾಡಿ ಆರೋಪಿಗಳನ್ನು ಬಂಧಿಸಿದೆ.
ಬಂಧಿತರಿಂದ ಕಳವು ಮಾಡಿದ 45,000 ರೂ. ಮೌಲ್ಯದ 51 ಕೆಜಿ ತಾಮ್ರದ ಹೊದಿಕೆ ಹಾಗೂ 1200ರೂ. ಮೌಲ್ಯದ 2 ಸಿಲಿಂಗ್ ಫ್ಯಾನ್, ಕೃತ್ಯಕ್ಕೆ ಬಳಸಿದ 1 ಲಕ್ಷ ರೂ. ಮೌಲ್ಯದ ಗೂಡ್ಸ್ ಅಟೋರಿಕ್ಷಾ, 70,000ರೂ. ಮೌಲ್ಯದ ಬೈಕ್ ನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ತಲೆಮರೆಸಿಕೊಂಡ ಇತರ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.






