ಮಣಿಪಾಲ, ಜನವರಿ 11, 2026: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ- ವಿಶ್ವವಿದ್ಯಾಲಯ ಎಂದು ಪರಿಗಣತವಾದ ಉತ್ಕೃಷ್ಟ ಸಂಸ್ಥೆ), ಅಕಾಡೆಮಿ ಆಫ್ ಜನರಲ್ ಎಜುಕೇಶನ್ (ಎಜಿಇ), ಮಣಿಪಾಲ ಎಜುಕೇಶನ್ ಮತ್ತು ಮೆಡಿಕಲ್ ಗ್ರೂಪ್, ಬೆಂಗಳೂರು (ಎಂಇಎಂಜಿ), ಮಣಿಪಾಲ್ ಮೀಡಿಯಾ ನೆಟ್‌ವರ್ಕ್ ಲಿಮಿಟೆಡ್ (ಎಂಎಂಎನ್‌ಎಲ್) ಹಾಗೂ ಡಾ. ಟಿ.ಎಂ.ಎ ಪೈ ಫೌಂಡೇಶನ್ ಸಹಯೋಗದೊಂದಿಗೆ ಆಯೋಜಿಸಿದ್ದ ‘ಹೊಸ ವರ್ಷದ ಪ್ರಶಸ್ತಿ- 2026’ ಪ್ರದಾನ ಕಾರ್ಯಕ್ರಮವು ಜನವರಿ 9, 2025 ರಂದು ಮಣಿಪಾಲದಲ್ಲಿ ನಡೆಯಿತು. ಈ ಸಮಾರಂಭದಲ್ಲಿ ಸಮಾಜಿಕ, ಕಲೆ ಮತ್ತು ಸಂಸ್ಕೃತಿ ಕ್ಷೇತ್ರಗಳಿಗೆ ನೀಡಿದ ಅಸಾಧಾರಣ ಕೊಡುಗೆಗಾಗಿ ಐವರು ಗಣ್ಯ ವ್ಯಕ್ತಿಗಳನ್ನು ‘ಹೊಸವರ್ಷದ ಪ್ರಶಸ್ತಿ -2026’ ಪ್ರದಾನ ಮಾಡಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮಾಹೆ ಟ್ರಸ್ಟ್‌ನ ಅಧ್ಯಕ್ಷರು, ಎಜಿಇ ರಿಜಿಸ್ಟ್ರಾರ್, ಎಂಇಎಂಜಿ (ಬೆಂಗಳೂರು) ಅಧ್ಯಕ್ಷರೂ ಆಗಿರುವ ಡಾ. ರಂಜನ್ ಆರ್. ಪೈ, ಮಾಹೆ ಟ್ರಸ್ಟಿನ ಟ್ರಸ್ಟಿ ವಸಂತಿ ಆರ್ ಪೈ, ಎಜಿಇ ಅಧ್ಯಕ್ಷರು ಹಾಗೂ ಮಾಹೆ ಸಹ ಕುಲಾಧಿಪತಿಗಳಾದ ಡಾ. ಎಚ್.ಎಸ್. ಬಲ್ಲಾಳ್, ಮಣಿಪಾಲ್ ಮೀಡಿಯಾ ನೆಟ್‌ವರ್ಕ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ಅಧ್ಯಕ್ಷರು ಹಾಗೂ ಎಜಿಇ ಉಪಾಧ್ಯಕ್ಷರಾದ ಟಿ. ಸತೀಶ್ ಯು. ಪೈ ಮತ್ತು ಮಣಿಪಾಲದ ಡಾ. ಟಿ.ಎಂ.ಎ ಪೈ ಫೌಂಡೇಶನ್‌ನ ಟ್ರಸ್ಟಿ ಟಿ. ಸಚಿನ್ ಪೈ ಅವರು ಉಪಸ್ಥಿತರಿದ್ದರು.
ಪ್ರಶಸ್ತಿ ಪುರಸ್ಕೃತರು: 2026ರ ಸಾಲಿನ ಪ್ರತಿಷ್ಠಿತ ಹೊಸ ವರ್ಷದ ಪ್ರಶಸ್ತಿಗೆ ಭಾಜನರಾದ ಗಣ್ಯರು:
• ಶ್ರೀ ಕೆ. ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವರು, ಕರ್ನಾಟಕ ಸರ್ಕಾರ
• ಶ್ರೀ ಕೆ. ಲಕ್ಷ್ಮೀನಾರಾಯಣನ್, ಮಾಜಿ ಕಾರ್ಯನಿರ್ವಾಹಕ ನಿರ್ದೇಶಕರು, ಕೆನರಾ ಬ್ಯಾಂಕ್.
• ಡಾ. ತುಂಬೆ ಮೊಯ್ದೀನ್, ಸಂಸ್ಥಾಪಕ ಅಧ್ಯಕ್ಷರು, ತುಂಬೆ ಗ್ರೂಪ್, ಯುಎಇ.
• ಶ್ರೀಮತಿ ವಿನಯಾ ಪ್ರಸಾದ್, ಹಿರಿಯ ನಟಿ.
• ಲೆ. ಜ. (ಡಾ.) ಎಂ.ಡಿ. ವೆಂಕಟೇಶ್ , ವಿಎಸ್‌ಎಂ (ನಿವೃತ್ತ), ಮಾಹೆ ಕುಲಪತಿ.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಎಜಿಇ ಅಧ್ಯಕ್ಷ ಹಾಗೂ ಮಾಹೆ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಅವರು, ‘ನಮ್ಮ ಸಮಾಜವನ್ನು ಶ್ರೀಮಂತಗೊಳಿಸಲು ಅರ್ಥಪೂರ್ಣ ಕೊಡುಗೆಗಳನ್ನು ನೀಡಿದ ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವುದು ಹೆಮ್ಮೆಯ ಸಂಗತಿ. ಶ್ರೇಷ್ಠತೆಯನ್ನು ಗುರುತಿಸುವುದು ಕೇವಲ ಅಭಿನಂದನೆಯಲ್ಲ, ಬದಲಾಗಿ ಅದು ಸಮಾಜದ ಬೌದ್ಧಿಕ ಮತ್ತು ಸಾಂಸ್ಕೃತಿಕ ಬಲವನ್ನು ಹೆಚ್ಚಿಸುವ ಪ್ರಕ್ರಿಯೆ. ಹೀಗೆ ಗುರುತಿಸುವ ಮೂಲಕ ಸಮಾಜದಲ್ಲಿ ಧನಾತ್ಮಕ ಬದಲಾವಣೆಗೆ ಪ್ರೇರಣೆ ನೀಡಿದಂತಾಗುತ್ತದೆ ’ ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮಾಹೆ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ. ವೆಂಕಟೇಶ್, ‘ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆ ಒಬ್ಬ ವ್ಯಕ್ತಿಗೆ ಸೀಮಿತವಾದುದಲ್ಲ, ಇದೊಂದು ಸಾಮೂಹಿಕ ಪ್ರಯತ್ನ. ಬೋಧಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಅವಿರತ ಶ್ರಮದ ಫಲವಿದು. ಇಡೀ ಮಾಹೆ ಸಮುದಾಯದ ಪರವಾಗಿ ನಾನು ಈ ಪ್ರಶಸ್ತಿಯನ್ನು ಸ್ವೀಕರಿಸುತ್ತೇನೆ’ ಎಂದು ಹೇಳಿದರು.
ಮಾಜಿ ಸಚಿವ, ಮಾಜಿ ಸಂಸದರಾದ ಕೆ. ಜಯಪ್ರಕಾಶ್ ಹೆಗ್ಡೆ ಮಾತನಾಡಿ, ‘ರಾಜ್ಯ ಸರ್ಕಾರ ನನಗೆ ಸಾಮಾಜಿಕ ಒಳಗೊಳ್ಳುವಿಕೆ ಮತ್ತು ಮೀಸಲಾತಿ ಸುಧಾರಣೆಗಳ ಜವಾಬ್ದಾರಿಯನ್ನು ನೀಡಿತ್ತು. ಆ ವೇಳೆ ಅನಾಥ ಮಕ್ಕಳನ್ನು ಮೀಸಲಾತಿ ವ್ಯಾಪ್ತಿಗೆ ತರಲು ವರದಿ ಸಲ್ಲಿಸಿದ್ದು ನನ್ನ ಸೇವಾವಧಿಯ ಅತ್ಯಂತ ತೃಪ್ತಿದಾಯಕ ಕ್ಷಣಗಳಲ್ಲಿ ಒಂದಾಗಿದೆ. ಇದರಿಂದ ಕುಟುಂಬವಿಲ್ಲದ ಮಕ್ಕಳೂ ಸಮಾನ ಅವಕಾಶ ಪಡೆಯಲು ಸಾಧ್ಯವಾಗಿದೆ. ಬಹುಶಃ ಇಂಥ ಸಮಾಜಪರ ಕೆಲಸಗಳಿಂದಾಗಿಯೇ ಈ ಪ್ರಶಸ್ತಿ ಸ್ವೀಕರಿಸಲು ಅರ್ಹನಾಗಿದ್ದೇನೆʼ ಎಂದು ಸ್ಮರಿಸಿದರು.
ತಮ್ಮ ವೃತ್ತಿಜೀವನದ ಹಳೆಯ ನೆನಪುಗಳನ್ನು ಹಂಚಿಕೊಂಡ ಕೆನರಾ ಬ್ಯಾಂಕ್‌ನ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕರಾದ ಕೆ. ಲಕ್ಷ್ಮೀನಾರಾಯಣನ್, ‘ಡಾ. ಟಿ.ಎಂ.ಎ. ಪೈ ಅವರು ಕೆನರಾ ಇಂಡಸ್ಟ್ರಿಯಲ್ ಮತ್ತು ಬ್ಯಾಂಕಿಂಗ್ ಸಿಂಡಿಕೇಟ್‌ನ ಮುಖ್ಯಸ್ಥರಾಗಿದ್ದ ಸಂದರ್ಭದಲ್ಲಿ, ಅವರನ್ನು ಭೇಟಿಯಾಗುವ ಅವಕಾಶ ನನಗೆ ಒದಗಿಬಂತು. ಅಂದು ನನ್ನ ಮೇಲಧಿಕಾರಿಗಳು ಪ್ರವಾಸದಲ್ಲಿದ್ದ ಕಾರಣ, ಶ್ರೀ ಪೈ ಅವರ ಅಗತ್ಯಗಳನ್ನು ಪೂರೈಸುವ ಜವಾಬ್ದಾರಿಯನ್ನು ನಾನೇ ನಿರ್ವಹಿಸಿದೆ. ಇದಾದ ಬಳಿಕ ನನಗೆ ಅವರಿಂದ ಉದ್ಯೋಗದ ಆಹ್ವಾನ ಬಂತು ಮತ್ತು ನಾನು ಅವರ ಬ್ಯಾಂಕ್‌ಗೆ ಸೇರಿದೆ. ಆರಂಭದಲ್ಲಿ ನನಗೆ ಸ್ಥಳೀಯ ಭಾಷೆ ಬರುತ್ತಿರಲಿಲ್ಲ, ಸ್ವಲ್ಪ ಸ್ವಲ್ಪ ಕನ್ನಡ ಮಾತನಾಡುತ್ತಿದ್ದೆ. ಆದರೂ ಕರಾವಳಿಯ ಜನ ನನ್ನನ್ನು ಪ್ರೀತಿಯಿಂದ ಒಪ್ಪಿಕೊಂಡರು. ಮುಂದೆ ಜರ್ಮನಿ ಮತ್ತು ಲಂಡನ್‌ನಲ್ಲಿ ಸೇವೆ ಸಲ್ಲಿಸಿ, ಕೆನರಾ ಬ್ಯಾಂಕ್‌ನ ಉನ್ನತ ಹುದ್ದೆಗೇರಿದ್ದು ನನ್ನ ಭಾಗ್ಯʼ ಎಂದರು.
ನಟಿ ವಿನಯಾ ಪ್ರಸಾದ್ ಮಾತನಾಡಿ, ‘ನನ್ನ ಕಲಾಯಾನ ಕನ್ನಡ ಸೇರಿದಂತೆ ದಕ್ಷಿಣದ ನಾಲ್ಕು ಭಾಷೆಗಳಲ್ಲಿ ಸಾಗಿಬಂದಿದೆ. ಪ್ರತಿ ಹಂತವೂ ನನಗೆ ಶಿಸ್ತು ಮತ್ತು ಸಮರ್ಪಣಾ ಮನೋಭಾವವನ್ನು ಕಲಿಸಿದೆ. ಜನರು, ಭಾವನೆಗಳು ಮತ್ತು ಸಮಾಜದ ಬಗೆಗಿನ ನಮ್ಮ ತಿಳುವಳಿಕೆಯನ್ನು ರೂಪಿಸುವ ಒಂದು ಪ್ರಬಲ ಮಾಧ್ಯಮ ಸಿನಿಮಾ. ಉಡುಪಿ ಯಾವಾಗಲೂ ಕಲೆ ಮತ್ತು ವಿದ್ಯೆಯ ಸಂಗಮ ಸ್ಥಳವಾಗಿದೆ. ಈ ಪರಂಪರೆಯನ್ನು ಮಾಹೆ ಜಾಗತಿಕ ಮಟ್ಟದಲ್ಲಿ ವಿಸ್ತರಿಸಿದೆ. ಈ ಗೌರವಕ್ಕೆ ನಾನು ಚಿರಋಣಿʼ ಎಂದು ಸಂತಸ ವ್ಯಕ್ತಪಡಿಸಿದರು.
ಯುಎಇಯ ತುಂಬೆ ಗ್ರೂಪ್‌ನ ಡಾ. ತುಂಬೆ ಮೊಯ್ದೀನ್ ಮಾತನಾಡಿ, ‘2026ರ ಸಾಲಿನ ಹೊಸ ವರ್ಷದ ಪ್ರಶಸ್ತಿ ನೀಡಿ ಗೌರವಿಸಿರುವುದು ನನಗೆ ಸಿಕ್ಕ ಗೌರವ ಮಾತ್ರವಲ್ಲ, ಇದು ಇಡೀ ‘ತುಂಬೆ ಸಮೂಹ’ದ ಸಂಘಟಿತ ದೃಷ್ಟಿಕೋನ ಹಾಗೂ ಅಚಲ ಬದ್ಧತೆಗೆ ಸಂದ ಮನ್ನಣೆಯಾಗಿದೆ. ಯುಎಇ ಮತ್ತು ಹೊರಗಿನ ಸಮಾಜದ ಒಳಿತಿಗಾಗಿ ಶ್ರಮಿಸುತ್ತಿರುವ ನಮ್ಮ ಆರೋಗ್ಯ, ಶಿಕ್ಷಣ ಮತ್ತು ಸಂಶೋಧನಾ ವಲಯದ ಪ್ರತಿಯೊಬ್ಬ ವೃತ್ತಿಪರರಿಗೂ ಈ ಗೌರವ ಸಲ್ಲಬೇಕು. ಮಾಹೆಯ ಉನ್ನತ ಮೌಲ್ಯಗಳೇ ನನಗೆ ಪ್ರೇರಣೆ. ಮಾಹೆಯು ಪಾಲಿಸಿಕೊಂಡು ಬರುತ್ತಿರುವ ಶ್ರೇಷ್ಠತೆ, ನಾವೀನ್ಯ, ಸಹಾನುಭೂತಿ ಹಾಗೂ ಶಿಕ್ಷಣ ಮತ್ತು ಚಿಕಿತ್ಸೆಯ ಮೂಲಕ ಸಮಾಜದಲ್ಲಿ ಪರಿವರ್ತನೆ ತರಬಹುದೆಂಬ ದೃಢ ವಿಶ್ವಾಸವೇ ನನ್ನ ಸಂಸ್ಥೆಗಳ ಬೆಳವಣಿಗೆಗೆ ಬುನಾದಿಯಾಗಿದೆʼ ಎಂದರು.
ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ನಿರ್ದೇಶಕ ಕಮಾಂಡರ್ ಡಾ. ಅನಿಲ್ ರಾಣಾ ಅವರು ವಂದನಾರ್ಪಣೆ ಸಲ್ಲಿಸಿದರು.






