ಉಡುಪಿ: ಜನವರಿ 09:ಜ.9ರಿಂದ 12ರ ವರೆಗೆ ದೆಹಲಿಯ ಭಾರತ ಮಂಟಪಂ ನಲ್ಲಿ ನಡೆಯುವ ‘ವಿಕಸಿತ ಭಾರತ ಯಂಗ್ ಲೀಡರ್ಸ್ ಡೈಲಾಗ್ 2026’ರಲ್ಲಿ ಭಾಗವಹಿಸಲು ಸತತ ದ್ವಿತೀಯ ಬಾರಿಗೆ ಬೆಂಗಳೂರಿನ ಚಾಣಕ್ಯ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಇನ್ನ ಗ್ರಾಮದ ಮನು ಶೆಟ್ಟಿ ಇನ್ನಾ ಆಯ್ಕೆಯಾಗಿದ್ದಾರೆ.
‘ವಿಕಸಿತ ಭಾರತ 2047’ ಗುರಿಯನ್ನು ತಲುಪುವಲ್ಲಿ ಯುವಕರ ಭೂಮಿಕೆಯನ್ನು ಉತ್ತೇಜಿಸುವ ಮತ್ತು ಅವರ ಯೋಚನೆಗಳನ್ನು ಹಂಚಿಕೊಳ್ಳಲು ಉದ್ದೇಶಿಸಿರುವ ಈ ಕಾರ್ಯಕ್ರಮದಲ್ಲಿ ಸ್ಟಾರ್ಟ್ಅಪ್ ಇಂಡಿಯಾ ಮಹಿಳಾ ನೇತೃತ್ವ, ಪಾರದರ್ಶಕ ಆಡಳಿತ, ಸಾಂಸ್ಕೃತಿಕ ಪ್ರಭಾವ ಮತ್ತು ಅವಿಷ್ಕಾರ ಮೊದಲಾದ ವಿವಿಧ ಮಹತ್ವದ ಥೀಮ್ ಆಧಾರಿತ ಚರ್ಚೆಗಳು ನಡೆಯಲಿವೆ.
ಗುಂಪು ಚರ್ಚೆಗಳಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಭಾರತದ ಮಹಿಳಾ ಕ್ರಿಕೆಟ್ ನಾಯಕಿ ಹರ್ಮನ್ ಪ್ರೀತ್ ಕೌರ್, ಬ್ಯಾಡ್ಮಿಂಟನ್ ಆಟಗಾರ ಪುಲ್ಲಿಲ ಗೋಪಿಚಂದ್, ಖ್ಯಾತ ಸಂವಹನ ತಜ್ಞೆ ಪಲ್ಕಿ ಶರ್ಮಾ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ.
ಜ.12ರಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅನುಭವ ಮತ್ತು ಮಾರ್ಗದರ್ಶನ ಹಂಚಿಕೊಳ್ಳಲಿದ್ದಾರೆ. ಈ ಸಂವಾದವು ಯುವ ಪೀಳಿಗೆಗೆ ರಾಷ್ಟ್ರದ ಗುರಿಗಳನ್ನು ರೂಪಿಸಲು ಪ್ರೇರಣೆ ನೀಡಲಿದೆ.






