ಉಡುಪಿ:ಜನವರಿ 08: ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ತಮ್ಮ ಪ್ರಥಮ ಪರ್ಯಾಯೋತ್ಸವಕ್ಕೆ ಪೂರ್ವಭಾವಿಯಾಗಿ ಪುಣ್ಯ ಕ್ಷೇತ್ರಗಳ ಸಂದರ್ಶನ ನಡೆಸುತ್ತಿದ್ದು, ಜ. 9 ರಂದು ನಾಳೆ ಉಡುಪಿಗೆ ಹಿಂತಿರುಗಲಿದ್ದು, ಅವರನ್ನು ಅದ್ಧೂರಿಯ ಮೆರವಣಿಗೆಯಲ್ಲಿ ಬರ ಮಾಡಿಕೊಳ್ಳಲಾಗುವುದು
ಶ್ರೀಗಳು ಶಿರೂರು ಗ್ರಾಮದಲ್ಲಿರುವ ಮೂಲಮಠಕ್ಕೆ ಆಗಮಿಸುತ್ತಾರೆ, ಅಲ್ಲಿ ಮುಖ್ಯಪ್ರಾಣ ದೇವರಿಗೆ ಪೂಜೆ ಸಲ್ಲಿಸಿ, ಮಧ್ಯಾಹ್ನ 3 ಗಂಟೆಗೆ ಉಡುಪಿ ನಗರದ ಕಡಿಯಾಳಿಗೆ ಆಗಮಿಸಿ ಅಲ್ಲಿ ಮಹಿಷಮರ್ಧಿನಿ ದೇವಾಲಯದಲ್ಲಿ ದೇವಿ ದರ್ಶನ ಪಡೆಯುತ್ತಾರೆ. ನಂತರ 3.30ರ ಮುಹೂರ್ತದಲ್ಲಿ ಶ್ರೀ ಮಠದ ಶ್ರೀ ವಿಠ್ಠಲ ದೇವರಿಗೆ ಪೂಜೆ ಸಲ್ಲಿಸಿ ಪುರಪ್ರವೇಶ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ
ಶ್ರೀಗಳನ್ನು ಸಾಂಪ್ರದಾಯಿಕ, ವೈಭವದ ಶೋಭಾಯಾತ್ರೆಯಲ್ಲಿ ತೆರೆದ ವಾಹನದಲ್ಲಿ ಉಡುಪಿ ನಗರಕ್ಕೆ ಕರೆ ತರಲಾಗುತ್ತದೆ. ಈ ಮೆರವಣಿಗೆಯಲ್ಲಿ ಶ್ರೀಮಠದ ಸಾಂಪ್ರಾದಾಯಿಕ ಬಿರುದಾವಳಿಗಳು, ಮಂಗಳ ವಾದ್ಯ ಘೋಷಗಳು, ವೈವಿಧ್ಯಮಯ ಸಾಂಸ್ಕೃತಿಕ ವೇಷಭೂಷಣಗಳು, ನೃತ್ಯ ತಂಡಗಳು, ಸಾವಿರಕ್ಕೂ ಹೆಚ್ಚು ಮಂದಿ ಭಜನೆಕಾರರು, ಸಾಮಾಜಿಕ, ಧಾರ್ಮಿಕ, ರಾಜಕೀಯ ಗಣ್ಯರು ಭಾಗವಹಿಸಲಿದ್ದಾರೆ
ಪುರಪ್ರವೇಶ ಮೆರವಣಿಗೆಯು ಕಡಿಯಾಳಿಯಿಂದ ಕಲ್ಸಂಕ, ಸಿಟಿ ಬಸ್ ನಿಲ್ದಾಣ, ಸರ್ವೀಸ್ ಬಸ್ ನಿಲ್ದಾಣ, ತ್ರಿವೇಣಿ ವೃತ್ತಗಳ ಮೂಲಕ ಕನಕದಾಸ ರಸ್ತೆಯಾಗಿ ರಥಬೀದಿ ಪ್ರವೇಶಿಸಲಿದೆ.
ಅಲ್ಲಿ ಶ್ರೀಗಳು ಕನಕನ ಕಿಂಡಿಯಿಂದ ಕೃಷ್ಣನ ದರ್ಶನ, ಮುಖ್ಯಪ್ರಾಣ ದೇವರ ದರ್ಶನ ಪಡೆದು, ಚಂದ್ರಮೌಳೀಶ್ವರ, ಅನಂತೇಶ್ವರ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಬಳಿಕ ಶ್ರೀಗಳಿಗೆ ಉಡುಪಿ ನಗರಸಭೆ ವತಿಯಿಂದ ರಥಬೀದಿಯಲ್ಲಿ ಪೌರ ಸನ್ಮಾನ ನಡೆಯಲಿದೆ. ಈ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಉದ್ಘಾಟಿಸಲಿದ್ದು, ನಗರಸಭಾ ಆಡಳಿತಾಧಿಕಾರಿಯಾಗಿರುವ ಡಿಸಿ ಸ್ವರೂಪ ಟಿ.ಕೆ., ಶಾಸಕ ಯಶ್‌ಪಾಲ್ ಸುವರ್ಣ, ಸಂಸದ ಕೋಟ ಶ್ರೀನಿವಾಸ ಪೂಜಾರಿ ಶ್ರೀಗಳನ್ನು ಸನ್ಮಾನಿಸಲಿದ್ದಾರೆ.
ಬೆಂಗಳೂರು ಪೂರ್ಣಪ್ರಜ್ಞಾ ವಿದ್ಯಾಪೀಠದ ಪ್ರಾಂಶುಪಾಲ ಡಾ. ಸತ್ಯನಾರಾಯಣ ಆಚಾರ್ಯರು ಅಭಿನಂದನಾ ಭಾಷಣ ಮಾಡಲಿದ್ದಾರೆ






