ನವದೆಹಲಿ: ಜನವರಿ 01: ಹೊಸ ವರ್ಷದ ಮೊದಲ ದಿನವೇ ವಾಣಿಜ್ಯ ಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರ ಗಣನೀಯವಾಗಿ ಏರಿಕೆಯಾಗಿದ್ದು, 111 ರೂ. ಹೆಚ್ಚಳವಾಗಿದೆ.
19 ಕೆ.ಜಿ ವಾಣಿಜ್ಯ ಸಿಲಿಂಡರ್‌ಗಳ ದರವನ್ನು 111 ರೂ. ಹೆಚ್ಚಿಸಲಾಗಿದ್ದು, ಇದು ಹೋಟೆಲ್, ರೆಸ್ಟೋರೆಂಟ್, ಕ್ಯಾಟರಿಂಗ್ ಸೇವೆ ಮತ್ತು ಸಣ್ಣ ವ್ಯಾಪಾರಗಳ ಮೇಲೆ ಪರಿಣಾಮ ಬೀರಲಿದೆ.
ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಗೃಹ ಬಳಕೆಯ ಪೈಪ್ಡ್ ನೈಸರ್ಗಿಕ ಅನಿಲ ದರವನ್ನು ಪ್ರತಿ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್‌ಗೆ 0.70 ರೂ. ಇಳಿಕೆ ಮಾಡಲಾಗಿದೆ. ಗೃಹ ಬಳಕೆಯ 14.2 ಕೆ.ಜಿ. ಎಲ್‌ಪಿಜಿ ಸಿಲಿಂಡರ್ ದರಗಳಲ್ಲಿ ಯಾವುದೇ ಬದಲಾವಣೆಯಿಲ್ಲ.
ಭಾರತೀಯ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ನೇತೃತ್ವದಲ್ಲಿ ಪ್ರತಿ ತಿಂಗಳ ಮೊದಲ ದಿನ ಅಂತಾರಾಷ್ಟ್ರೀಯ ತೈಲ ದರಗಳ ಆಧಾರದಲ್ಲಿ ಎಲ್‌ಪಿಜಿ ದರಗಳನ್ನು ಪರಿಷ್ಕರಿಸಲಾಗುತ್ತದೆ. ಈ ಬಾರಿ ವಾಣಿಜ್ಯ ಸಿಲಿಂಡರ್‌ಗಳ ದರ ಏರಿಕೆಯಾಗಿದ್ದು, ದೆಹಲಿಯಲ್ಲಿ ಹಿಂದೆ 1,580.50 ರೂ. ಇದ್ದ 19 ಕೆ.ಜಿ. ಸಿಲಿಂಡರ್ ಈಗ 1,691.50 ರೂ.ಗೆ ಲಭ್ಯವಾಗಲಿದೆ.
ಪ್ರಮುಖ ನಗರಗಳಲ್ಲಿ ಹೊಸ ವಾಣಿಜ್ಯ ಎಲ್‌ಪಿಜಿ ದರಗಳು (19 ಕೆ.ಜಿ):
ದೆಹಲಿ: 1,691.50 ರೂ. (ಹಿಂದೆ 1,580.50 ರೂ.)
ಮುಂಬೈ: 1,642.50 ರೂ. (ಹಿಂದೆ 1,531.50 ರೂ.)
ಕೋಲ್ಕತಾ: 1,795 ರೂ. (ಹಿಂದೆ 1,684 ರೂ.)
ಚೆನ್ನೈ: 1,849.50 ರೂ.
ಈ ಏರಿಕೆಯಿಂದ ಹೋಟೆಲ್ ಮತ್ತು ರೆಸ್ಟೋರೆಂಟ್ ವ್ಯಾಪಾರಿಗಳ ವೆಚ್ಚ ಹೆಚ್ಚಾಗಲಿದ್ದು, ಆಹಾರ ದರಗಳ ಮೇಲೂ ಪರೋಕ್ಷ ಪ್ರಭಾವ ಬೀರಬಹುದು








