ಉಡುಪಿ: ಡಿಸೆಂಬರ್ 11:ಅನರ್ಹ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದು ಮಾಡಲಾಗುತ್ತಿದ್ದು, ಆಹಾರ ಇಲಾಖೆ ಪಡಿತರ ಚೀಟಿಗೆ ಹೊಸದಾಗಿ ಸದಸ್ಯರ ಹೆಸರು ಸೇರ್ಪಡೆ ಮಾಡುವ ಕ್ರಮಗಳನ್ನು ಮತ್ತಷ್ಟು ಬಿಗಿ ಮಾಡಿದೆ.
ಹೊಸದಾಗಿ ಪಡಿತರ ಚೀಟಿ ಪಡೆಯಲು ಮಾತ್ರವಲ್ಲ, ತಮ್ಮ ಕುಟುಂಬ ಸದಸ್ಯರ ಹೆಸರುಗಳನ್ನು ಸೇರ್ಪಡೆ ಮಾಡಲು ಕೂಡ ಜಾತಿ, ಆದಾಯ, ವಿವಾಹ ಮತ್ತಿತರ ಪ್ರಮಾಣ ಪತ್ರಗಳನ್ನು ಕಡ್ಡಾಯಗೊಳಿಸಲಾಗಿದೆ.
ಪಡಿತರ ಚೀಟಿಗಳಲ್ಲಿ ಇನ್ನು ಮುಂದೆ ತಮ್ಮ ಕುಟುಂಬದ ಸದಸ್ಯರ ಹೆಸರನ್ನು ಸೇರ್ಪಡೆ ಮಾಡಬೇಕಾದಲ್ಲಿ ಅಥವಾ ತಿದ್ದುಪಡಿ ಮಾಡಬೇಕಾದಲ್ಲಿ ಕೆಲವು ದಾಖಲೆಗಳ ಸಲ್ಲಿಕೆ ಕಡ್ಡಾಯವಾಗಿದೆ.
ಹೊಸದಾಗಿ ಮದುವೆಯಾಗಿದ್ದಲ್ಲಿ ಪತಿ-ಪತ್ನಿ ಹೆಸರು ಸೇರಿಸಬಹುದು. ಹೆಸರು ತಿದ್ದುಪಡಿ, ಫೋಟೋ, ವಿಳಾಸ ಬದಲಾವಣೆ, ಹೆಸರು ಡಿಲೀಟ್, ಅಂಗಡಿ ಬದಲಾವಣೆ, ಕಾರ್ಡ್ ನಲ್ಲಿರುವ ಮುಖ್ಯಸ್ಥರ ಬದಲಾವಣೆ ಮಾಡಿಸಬಹುದು.
ಆರು ವರ್ಷ ಮೇಲ್ಪಟ್ಟಿದ್ದರೆ ಅವರ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆರು ವರ್ಷದೊಳಗಿನ ಮಕ್ಕಳಿಗೆ ಜನನ ಪ್ರಮಾಣ ಪತ್ರ, ತಂದೆ- ತಾಯಿಯ ಆಧಾರ್ ಕಾರ್ಡ್, ತಂದೆ -ತಾಯಿಯ ಪಡಿತರ ಚೀಟಿಯ ಮೂಲ ದಾಖಲೆಗಳು ಕಡ್ಡಾಯವಾಗಿದೆ.
ಮದುವೆಯಾಗಿ ಬರುವ ಸೊಸೆಗೆ ವಿವಾಹ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಹಳೆಯ ಕಾರ್ಡ್ ನಿಂದ ಹೆಸರು ತೆಗೆದ ದಾಖಲೆ ಕಡ್ಡಾಯವಾಗಿದೆ. ಬೆಂಗಳೂರು ಒನ್, ಸೈಬರ್ ಸೆಂಟರ್ ಗಳಲ್ಲಿ ಅಥವಾ ಇಲಾಖೆಯ ಅಧಿಕೃತ ವೆಬ್ಸೈಟ್ ಮೂಲಕ ಸ್ವಯಂ ಅರ್ಜಿ ಸಲ್ಲಿಸಬಹುದು. ಬಿಪಿಎಲ್ ಕಾರ್ಡ್ ಗಳನ್ನು ಹೊಸದಾಗಿ ಪಡೆಯಲು ಇನ್ನು ಅವಕಾಶ ಕಲ್ಪಿಸಿಲ್ಲ.








