ಬೆಂಗಳೂರು: ಡಿಸೆಂಬರ್ 05: ದೇಶದಾದ್ಯಂತ ಇಂಡಿಗೊ ಏರ್‌ಲೈನ್ಸ್ ಸಂಸ್ಥೆಯ ದೇಶಿಯ ಹಾಗೂ ಅಂತರಾಷ್ಟ್ರೀಯ ವಿಮಾನಗಳ ಸಂಚಾರದಲ್ಲಿ ಭಾರಿ ವ್ಯತ್ಯಯ ಇಂದೂ ಮುಂದುವರೆದಿದೆ.
ದೇಶದ ಹಲವು ನಗರಗಳಲ್ಲಿನ ವಿಮಾನ ನಿಲ್ದಾಣಗಳಲ್ಲಿ ಇಂಡಿಗೊ ಸಂಸ್ಥೆಯ ವಿಮಾನಗಳ ರದ್ದು, ಸಮಯ ವ್ಯತ್ಯಯದಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ದಿನವೀಡಿ ಅಲ್ಲಿಯೇ ಕಾದು ಕುಳಿತಿದ್ದಾರೆ. ಹಲವರು ವಿಮಾನ ನಿಲ್ದಾಣದ ಸಿಬ್ಬಂದಿಯ ಜೊತೆ ವಾಗ್ವಾದ ನಡೆಸುತ್ತಿರುವುದು ಕಂಡು ಬಂದಿದೆ.
ಈ ಭಾರಿ ಸಮಸ್ಯೆಯಿಂಂದ ತೀವ್ರ ತೊಂದರೆಗೆ ಸಿಲುಕಿರುವ ಇಂಡಿಗೊ, ಇಂದು ರಾತ್ರಿ 12 ಗಂಟೆಯವರೆಗೂ 400 ಕ್ಕೂ ಹೆಚ್ಚು ದೇಶೀಯ ವಿಮಾನಗಳನ್ನು ರದ್ದು ಮಾಡಿದೆ. 100ಕ್ಕೂ ಹೆಚ್ಚು ಅಂತರರಾಷ್ಟ್ರೀಯ ವಿಮಾನಗಳನ್ನು ರದ್ದು ಮಾಡಲಾಗಿದೆ.
ಅದಾಗ್ಯೂ ಹಲವು ಪ್ರಯಾಣಿಕರು ದೆಹಲಿ, ಬೆಂಗಳೂರು, ಚೆನ್ನೈ, ಮುಂಬೈ, ಹೈದರಾಬಾದ್ ಸೇರಿದಂತೆ ಅನೇಕ ವಿಮಾನ ನಿಲ್ದಾಣಗಳಲ್ಲಿಯೇ ದೂರದ ಸ್ಥಳಗಳಿಗೆ ತೆರಳಲು ಕಾಯ್ದ ಕುಳಿತಿದಿದ್ದಾರೆ. ಕೆಲವರು ಟರ್ಮಿನಲ್‌ಗಳಲ್ಲೇ ಮಲಗಿರುವ, ಊಟ, ತಿಂಡಿ ಸೇವಿಸುತ್ತಿರುವ ದೃಶ್ಯಗಳು ಕಂಡು ಬಂದಿವೆ.
ಡಿಸೆಂಬರ್ 1ರಿಂದ ಆರಂಭವಾದ ಈ ಸಮಸ್ಯೆಯಿಂದ ಕೆಲವರು 12 ಗಂಟೆ ಕಾಯಬೇಕಾಗಬಹದು ಎಂದುಕೊಂಡರು. ಆದರೆ, 24 ಗಂಟೆಗಳೂ ಮೀರಿ ಇದೀಗ 48 ಗಂಟೆಗಳ ಕಾಯುವಿಕೆ ಮೊರೆ ಹೋಗಿದ್ದಾರೆ. ಹಲವರು ವಿಮಾನ ಪ್ರಯಾಣ ರದ್ದು ಮಾಡಿ ಮನೆಗೆ ತೆರಳಿದ್ದರೆ, ಇನ್ನೂ ಕೆಲವರು ವಿಮಾನ ನಿಲ್ದಾಣಗಳಲ್ಲಿಯೇ ಕಾಯುತ್ತಿದ್ದಾರೆ.
ಬೆಂಗಳೂರು ವಿಮಾನ ನಿಲ್ದಾಣದಿಂದ ಹೊರಡಲಿದ್ದ 102 ಇಂಡಿಗೊ ವಿಮಾನಗಳು ರದ್ದಾಗಿವೆ. ಇಲ್ಲಿಯೂ ಸಹ ಅನೇಕ ಪ್ರಯಾಣಿಕರು ಇಂಡಿಗೊ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿರುವ ವಿಡಿಯೊಗಳು ಬಂದಿವೆ.
ಇಂಡಿಗೊದಲ್ಲಿ ಆಗಿರುವ ಹೊಸ ಬೆಳವಣಿಗೆಯ ಸಮಸ್ಯೆಯಿಂದ ಒಟ್ಟಾರೆ ಈ ವಾರದಲ್ಲಿ 1000ಕ್ಕೂ ಹೆಚ್ಚು ವಿಮಾನಗಳು ರದ್ದಾಗಿದ್ದವು. ದೆಹಲಿ, ಬೆಂಗಳೂರು, ಹೈದರಾಬಾದ್, ಚೆನ್ನೈ ವಿಮಾನ ನಿಲ್ದಾಣಗಳಿಂದ ಹೆಚ್ಚು ವಿಮಾನಗಳು ರದ್ದಾಗಿವೆ.
ಏತನ್ಮಧ್ಯೆ ಇಂಡಿಗೊ ಸಂಸ್ಥೆ ಸಾಮಾಜಿಕ ತಾಣಗಳ ಮೂಲಕ ಹಾಗೂ ಮೇಲ್ ಮೂಲಕ ಆಗಿರುವ ಅಡಚಣೆ ಬಗ್ಗೆ ಪ್ರಯಾಣಿಕರ ಕ್ಷಮೆ ಕೇಳಿದೆ. ಶೀಘ್ರವೇ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದು ತಿಳಿಸಿದೆ.
ಇಂಡಿಗೊ ಸಂಸ್ಥೆ ಇತ್ತೀಚೆಗೆ ತನ್ನ Flight Duty Time Limitations (FDTL) ನಿಯಮಾವಳಿಗಳಲ್ಲಿ ಬದಲಾವಣೆ ಮಾಡಿಕೊಂಡಿದೆ. ನವೆಂಬರ್ 1ರಿಂದ FDTL ಫೇಸ್ 2 ಜಾರಿಗೆ ಬಂದಿದೆ. ಇದರಿಂದ ಪೈಲಟ್‌ಗಳ ಶಿಫ್ಟ್ ಅವಧಿಗಳಲ್ಲಿ ಬದಲಾವಣೆ ಆಗಿದೆ.
ಪಕ್ಕಾ ಸಿದ್ದತೆ ಮಾಡಿಕೊಳ್ಳದೇ ಹೊಸ ನಿಯಮಾವಳಿಗಳನ್ನು ಜಾರಿಗೆ ತಂದಿರುವುದರಿಂದ ಇಂಡಿಗೊ ಸಂಸ್ಥೆ ತೀವ್ರ ಸಮಸ್ಯೆ ಎದುರಿಸಿದೆ.
ಏರ್ ಇಂಡಿಗೊ ಸಂಸ್ಥೆಯ ಭಾರತದ ಖಾಸಗಿ ವಲಯದ ಒಂದು ಪ್ರಮುಖ ವಿಮಾನಯಾದ ಸಂಸ್ಥೆಯಾಗಿದೆ. ಶೇ 60 ರಷ್ಟು ದೇಶಿಯ ವಿಮಾನ ಪ್ರಯಾಣವನ್ನು ಇದು ನಿಭಾಯಿಸುತ್ತದೆ.
FDTLನ ಎರಡನೇ ಹಂತವನ್ನು ಜಾರಿಗೊಳಿಸುವಲ್ಲಿ ಇಂಡಿಗೊ ಎಡವಿದೆ. ಪ್ರಾಥಮಿಕ ಸಿದ್ದತೆಗಳು ಕಾಣಿಸಿಲ್ಲ ಹಾಗೂ ತಪ್ಪು ನಿರ್ಣಯಗಳು ಇದಕ್ಕೆ ಕಾರಣವಾಗಿದೆ. ಈ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಇಂಡಿಗೊ ತನ್ನ ತಪ್ಪನ್ನು ಒಪ್ಪಿಕೊಂಡಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ದೇಶದ ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಏಕಸ್ವಾಮ್ಯ ಸಾಧಿಸಲು ಯತ್ನಿಸುತ್ತಿರುವವರಿಗೆ ಕೇಂದ್ರ ಸರ್ಕಾರ ಅನುವು ಮಾಡಿಕೊಡಲು ನೋಡುತ್ತಿದೆ. ಇದರಿಂದ ಸಾವಿರಾರು ಇಂಡಿಗೊ ಪ್ರಯಾಣಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕಿಡಿಕಾರಿದ್ದಾರೆ. ಅನೇಕ ರಾಜಕೀಯ ನಾಯಕರು ಈ ಸಮಸ್ಯೆಯನ್ನು ತುರ್ತು ಬಗೆಹರಿಸಬೇಕು ಎಂದು ಡಿಜಿಸಿಎ ಹಾಗೂ ಸಿವಿಲ್ ಏವಿಯಷನ್ ಸಚಿವರಿಗೆ ಮನವಿ ಮಾಡಿದ್ದಾರೆ
ಇಂಡಿಗೊ ವಿಮಾನಗಳು ರದ್ದಾಗಿದ್ದರಿಂದ ತೊಂದರೆ ಅನುಭವಿಸಿರುವ ಪ್ರಯಾಣಿಕರು ಬೇರೆ ವಿಮಾನಗಳನ್ನು ಆಶ್ರಯಿಸಿದ್ದಾರೆ. ಆದರೆ, ಟಿಕೆಟ್ ದರ ಹೆಚ್ಚಿಸಲಾಗಿದೆ ಎಂದು ಪ್ರಯಾಣಿಕರ ಹೇಳಿಕೆ ಆಧರಿಸಿ ಎಚ್‌ಟಿ ವೆಬ್‌ಸೈಟ್ ವರದಿ ಮಾಡಿದೆ. ಇನ್ನೂ ಕೆಲವರು ತಮ್ಮ ಲಗೇಜುಗಳು ಸಿಗುತ್ತಿಲ್ಲ ಎಂಬ ದೂರುಗಳನ್ನು ಹೇಳಿಕೊಂಡಿದ್ದಾರೆ.







