ಬೆಂಗಳೂರು:ಡಿಸೆಂಬರ್ 04:ಭಾರತದ ಅತ್ಯಂತ ಹಳೆಯ ನಿರ್ಮಾಣ ಸಂಸ್ಥೆಗಳಲ್ಲಿ ಒಂದು ಎವಿಎಂ ನಿರ್ಮಾಣ ಸಂಸ್ಥೆ, ಡಾ ರಾಜ್ಕುಮಾರ್ ನಾಯಕನಾಗಿ ನಟಿಸಿದ ಮೊದಲ ಸಿನಿಮಾದ ನಿರ್ಮಾಣವನ್ನೂ ಇದೇ ಸಂಸ್ಥೆ ಮಾಡಿತ್ತು. ಈ ಸಂಸ್ಥೆಯನ್ನು ಅರ್ಧ ಶತಮಾನಕ್ಕೂ ಹೆಚ್ಚು ಕಾಲ ನಡೆಸಿ, ಲಿಜೆಂಡರಿ ನಿರ್ಮಾಪಕ ಎನಿಸಿಕೊಂಡಿರುವ ಎವಿಎಂ ಸರವಣ ಅವರು ನಿಧನರಾಗಿದ್ದಾರೆ.
ಎವಿಎಂ, ಭಾರತದ ಅತ್ಯಂತ ಹಳೆಯ ಸಿನಿಮಾ ನಿರ್ಮಾಣ ಸಂಸ್ಥೆಗಳಲ್ಲಿ ಒಂದು. ನಟಸಾರ್ವಭೌಮ ಡಾ ರಾಜ್ಕುಮಾರ್ ಅವರು ನಾಯಕನಾಗಿ ನಟಿಸಿದ ಮೊಟ್ಟ ಮೊದಲ ಸಿನಿಮಾ ‘ಬೇಡರ ಕಣ್ಣಪ್ಪ’ ಸಿನಿಮಾ ನಿರ್ಮಾಣ ಮಾಡಿದ್ದು ಸಹ ಇದೇ ಎವಿಎಂ ನಿರ್ಮಾಣ ಸಂಸ್ಥೆ. ಇದೀಗ ಈ ನಿರ್ಮಾಣ ಸಂಸ್ಥೆಯಲ್ಲಿ ನಿರ್ಮಾಪಕರಾಗಿ ಹಲವಾರು ಸಿನಿಮಾಗಳನ್ನು ನಿರ್ಮಿಸಿ, ತಮಿಳು ಮಾತ್ರವಲ್ಲದೆ ದಕ್ಷಿಣ ಭಾರತದ ಲೆಜೆಂಡರಿ ನಿರ್ಮಾಪಕ ಎನಿಸಿಕೊಂಡಿದ್ದ ಎವಿಎಂ ಸರವಣನ್ ಅವರು ನಿಧನ ಹೊಂದಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.
ಭಾರತೀಯ ಸಿನಿಮಾ ರಂಗದ ವಿಶೇಷವಾಗಿ ದಕ್ಷಿಣ ಭಾರತ ಸಿನಿಮಾ ರಂಗವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎವಿ ಮೇಯಪ್ಪನ್ ಅವರ ಪುತ್ರ ಎವಿ ಸರವಣ ಅವರು ಸಹ ತಂದೆಯ ರೀತಿಯೇ ತಮಿಳು, ತೆಲುಗು ಇನ್ನಿತರೆ ಭಾಷೆಗಳಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. 1943 ರಲ್ಲಿ ಪ್ರಾರಂಭವಾದ ಎವಿಎಂ ನಿರ್ಮಾಣ ಸಂಸ್ಥೆಯನ್ನು ಸುಮಾರು ಅರ್ಧ ಶತಮಾನದ ಕಾಲ ನಡೆಸಿದ ಸರವಣನ್ ಅವರು ಹಲವಾರು ಅತ್ಯುತ್ತಮ ಸಿನಿಮಾಗಳನ್ನು ನೀಡಿದ್ದಾರೆ. ಈಗ ತಮಿಳಿನಲ್ಲಿ ಸ್ಟಾರ್ಗಳಾಗಿರುವ ಹಲವು ನಟರಿಗೆ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಖ್ಯಾತಿ ಅವರಿಗಿದೆ.
ಸರವಣನ್ ಅವರು, ರಜನೀಕಾಂತ್ ನಟನೆಯ ‘ಶಿವಾಜಿ’, ರಾಣಾ ದಗ್ಗುಬಾಟಿ ನಟನೆಯ ‘ಲೀಡರ್’, ಸೂರ್ಯ ನಟನೆಯ ‘ಅಯನ್’, ಪ್ರಭುದೇವ, ಕಾಜೊಲ್ ನಟನೆಯ ‘ಮಿನ್ಸರ ಕನವು’, ದಳಪತಿ ವಿಜಯ್ ನಟನೆಯ ‘ವೇಟ್ಟೈಕಾರನ್’, ಅಜಿತ್ ನಟನೆಯ ‘ತಿರುಪತಿ’, ವಿಕ್ರಂ ನಟನೆಯ ‘ಜೆಮಿನಿ’, ವಿಜಯ್ಕಾಂತ್ ನಟನೆಯ ‘ಶಕ್ತಿವೇಲ್ ಐಪಿಎಸ್’, ರಜನೀಕಾಂತ್ ನಟನೆಯ ‘ಯಜಮಾನ’, ಕಮಲ್ ಹಾಸನ್ ನಟನೆಯ ‘ಸಕಲಕಲಾವಲ್ಲಭನ್’, ಶಿವಾಜಿ ಗಣೇಶನ್ ನಟನೆಯ ಹಲವಾರು ಸಿನಿಮಾಗಳು, ಅರ್ಜುನ್ ಸರ್ಜಾ ನಟನೆಯ ಹಲವಾರು ಸಿನಿಮಾಗಳನ್ನು ಎವಿಎಂ ನಿರ್ಮಾಣ ಮಾಡಿದ್ದು, ರಜನೀಕಾಂತ್, ಕಮಲ್, ಅರ್ಜುನ್ ಸರ್ಜಾ, ವಿಜಯ್, ವಿಕ್ರಂ, ಅಜಿತ್ ಇನ್ನೂ ಹಲವಾರು ಈಗಿನ ಸ್ಟಾರ್ ನಟರುಗಳ ಸಿನಿಮಾಗಳನ್ನು ಸರವಣ ನಿರ್ಮಾಣ ಮಾಡಿದ್ದರು.








