ಉಡುಪಿ:ಡಿಸೆಂಬರ್ 03: ಉಡುಪಿ ಚಿಟ್ಪಾಡಿಯ ಶೈಲಾ ವಿಲ್ಹೆಲ್ ಮೀನಾ ಅವರ ಮನೆಯಲ್ಲಿ ನವೆಂಬರ್ 30ರಂದು ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ನಗರ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ
ಉಡುಪಿ ಚಿಟ್ಪಾಡಿಯ ಶಾರದಾಂಬ ದೇವಾಸ್ಥಾನ ಗೋಪುರ ಬಳಿಯ ಮನೆಯೊಂದರಲ್ಲಿ ನ.30ರಂದು 65.79 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಉಡುಪಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಕುಕ್ಕಿಕಟ್ಟೆಯ ನಿವಾಸಿ ಸುಕೇಶ ನಾಯ್ಕ (37) ಎಂಬಾತ ಚಿನ್ನಾಭರಣ, ಮೊಬೈಲ್ ಫೋನ್ ಸಹಿತ ಒಟ್ಟು 65,79,720 ಲ.ರೂ. ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ್ದು ಕಳವಾದ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನಗರಠಾಣೆಯ ಡಿವೈಎಸ್‌ಪಿ ಡಿ.ಟಿ. ಪ್ರಭು ಮಾರ್ಗದರ್ಶನದಲ್ಲಿ ನಗರ ಠಾಣೆಯ ಪೊಲೀಸ್ ನಿರೀಕ್ಷಕ (ಪ್ರಭಾರ) ಮಹೇಶ ಪ್ರಸಾದ್ ಹಾಗೂ ಪೊಲೀಸ್ ಉಪನಿರೀಕ್ಷಕ ಭರತೇಶ ಕಂಕಣವಾಡಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಯಿತು.
ಠಾಣೆಯ ಸಿಬಂದಿಗಳಾದ ಪ್ರಸನ್ನ ಸಿ., ಜೀವನ್ ಕುಮಾರ್, ಸಂತೋಷ್ ಶೆಟ್ಟಿ, ಬಶೀರ್, ಸುರೇಂದ್ರ ಡಿ., ಆನಂದ ಎಸ್., ಸಂತೋಷ್ ರಾಥೋಡ್, ಸಂತೋಷ್ ಗುಲ್ವಾಡಿ ಅವರನ್ನೊಳಗೊಂಡ ಅಪರಾಧ ಪತ್ತೆ ತಂಡವು ಡಿ. 2ರಂದು ಆರೋಪಿಯನ್ನು ಕಿನಿಮೂಲ್ಕಿಯಲ್ಲಿ ವಶಕ್ಕೆ ಪಡೆದಿದೆ.
ಆರೋಪಿಯು ಕಳವುಗೈದ ಸೊತ್ತುಗಳನ್ನು ಅಜ್ಜರಕಾಡು ಮನೆಯೊಂದರಲ್ಲಿ ಇಟ್ಟಿರುವುದಾಗಿ ತಿಳಿಸಿದ್ದು, ಕಳವಾದ ಎಲ್ಲ ಸೊತ್ತುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ








