ಡಿಸೆಂಬರ್ 02: ಗೋವಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ರಿಷಬ್ ಶೆಟ್ಟಿ ಅವರನ್ನು ಹೊಗಳುವ ಭರದಲ್ಲಿ ರಣವೀರ್ ಸಿಂಗ್ ಕಾಂತರ ಚಾಪ್ಟರ್ 1 ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯವನ್ನು ಅನುಕರಣೆ ಮಾಡಿದರು.
ರಣ್‌ವೀರ್ ಸಿಂಗ್ ಅವರ ಈ ವರ್ತನೆ ಸಹಜವಾಗಿಯೇ ಹಲವರನ್ನು ಕೆರಳಿಸಿತ್ತು. ಕರುನಾಡಿನೆಲ್ಲೆಡೆ ಮಾತ್ರವಲ್ಲ ದೇಶದ ನಾನಾ ಕಡೆ ರಣ್‌ವೀರ್ ಸಿಂಗ್ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.#ShameOnRanveerSingh ಹ್ಯಾಶ್ ಟ್ಯಾಗ್ ”ಎಕ್ಸ್”ನಲ್ಲಿ (ಟ್ವಿಟರ್) ಟ್ರೆಂಡ್ ಆಗಿತ್ತು. ರಣವೀರ್ ಸಿಂಗ್ ಮಂಗಳೂರಿನ ಕದ್ರಿ ಮಂಜುನಾಥನ ಸನ್ನಿಧಿಗೆ ಬಂದು ಕ್ಷಮೆ ಕೇಳಬೇಕು. ಈ ತುಳುನಾಡಿನ ಮಣ್ಣಿಗೆ ಶರಣಾಗಬೇಕು ಎಂಬ ಕೂಗು ಕೂಡ ಕೇಳಿ ಬಂದಿತ್ತು.
ದೇಶವ್ಯಾಪಿ ತನ್ನ ವಿರುದ್ಧ ಎದ್ದ ಈ ಆಕ್ರೋಶದ ಅಲೆಯನ್ನು ಕಂಡು ಸದ್ಯ ಬೆಚ್ಚಿ ಬಿದ್ದಿರುವ ರಣವೀರ್ ಸಿಂಗ್, ತಮ್ಮ ಈ ವರ್ತನೆಗೆ ಕೊನೆಗೂ ಈಗ ಕ್ಷಮೆ ಕೇಳಿದ್ದಾರೆ. ನೋವುಂಟು ಮಾಡುವ ಉದ್ದೇಶ ನನ್ನದಾಗಿರಲಿಲ್ಲ ಎಂದಿದ್ದಾರೆ.
ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿರುವ ರಣ್‌ವೀರ್ ಸಿಂಗ್ ಚಿತ್ರದಲ್ಲಿನ ರಿಷಬ್ ಅವರ ಅದ್ಭುತ ಅಭಿನಯವನ್ನು ಎತ್ತಿ ತೋರಿಸುವುದು ಅಷ್ಟೇ ನನ್ನ ಮುಖ್ಯ ಉದ್ದೇಶವಾಗಿತ್ತು. ಒಬ್ಬ ನಟನಾಗಿ ಆ ದೃಶ್ಯವನ್ನು ಮಾಡಲು ಎಷ್ಟು ಶ್ರಮ ವಹಿಸಬೇಕು ಎಂಬುದು ನನಗೆ ತಿಳಿದಿದೆ. ಹೀಗಾಗಿ ಅವರ ಬಗ್ಗೆ ನನಗೆ ಮೆಚ್ಚುಗೆ ಇದೆ ಎಂದು ಹೇಳಿದ್ದಾರೆ.
ಮುಂದುವರೆದು ನಮ್ಮ ದೇಶದ ಪ್ರತಿಯೊಂದು ಸಂಸ್ಕೃತಿ.. ಸಂಪ್ರದಾಯ ಮತ್ತು ನಂಬಿಕೆಯನ್ನು ನಾನು ಯಾವಾಗಲೂ ಆಳವಾಗಿ ಗೌರವಿಸುತ್ತೇನೆ ಎಂದು ಹೇಳಿರುವ ರಣವೀರ್ ಸಿಂಗ್ ನನ್ನಿಂದ ಯಾರದ್ದಾದರೂ ಭಾವನೆಗಳಿಗೆ ಧಕ್ಕೆಯುಂಟಾಗಿದ್ದರೆ, ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
ಸದ್ಯ ಮಾಡಿದ ತಪ್ಪಿಗೆ ರಣವೀರ್ ಸಿಂಗ್, ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಕ್ಷಮೆಯನ್ನು ಕೇಳಿದ್ದಾರೆ.








