ಬೆಳ್ತಂಗಡಿ: ನವೆಂಬರ್ 13:ಆತ್ಮಹತ್ಯೆ ಒಂದೇ ಎಲ್ಲಾ ಸಮಸ್ಯೆಗೆ ಪರಿಹಾರ ಅಲ್ಲ ಈ ಬಗ್ಗೆ ಎಷ್ಟೇ ಜಾಗ್ರತಿ ಅರಿವು ಮೂಡಿಸಿದರೂ ಕೂಡ ಆತ್ಮಹತ್ಯೆ ಪ್ರಕರಣ ದಿನೇ ದಿನೇ ಹೆಚ್ಚುತಿದೆ ಅನ್ನೋದೇ ದುರಾದ್ರಷ್ಟಕರದ ಸಂಗತಿ
ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಬಾಲಕಿಯೋರ್ವಳು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ನವೆಂಬರ್ 12ರಂದು ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದಲ್ಲಿ ನಡೆದಿದೆ.
ಪಾರಡ್ಕ ನಿವಾಸಿ ಶ್ರೀಧರ ಕುಂಬಾರ ಎಂಬವರ ಪುತ್ರಿ ಹರ್ಷಿತಾ (15) ಮೃತ ಬಾಲಕಿ.ಈಕೆ ಉಪ್ಪಿನಂಗಡಿಯ ಪ್ರೌಢಶಾಲೆಯಲ್ಲಿ 10 ತರಗತಿ ಕಲಿಯುತ್ತಿದ್ದು ನ.4ರಂದು ತಲೆನೋವು ಎಂದು ಹೇಳಿ ಶಾಲೆಗೆ ಹೋಗದೇ ಮನೆಯಲ್ಲಿದ್ದಳು.
ಮನೆಯಲ್ಲಿ ಕೀಟನಾಶಕ ಸೇವಿಸಿ ಅಸ್ವಸ್ಥಗೊಂಡ ಅವಳನ್ನು ತಾಯಿ ಚಿಕಿತ್ಸೆಗೆಂದು ಪುತ್ತೂರು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಹರ್ಷಿತಾ ನ. 12ರಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಹರ್ಷಿತಾಳಿಗೆ ಕಡಬದ ರಾಜೇಶ್ ಎಂಬಾತನು ಫೋನ್ ಮಾಡಿ ಕಿರುಕುಳ ನೀಡಿರುವ ಸಾಧ್ಯತೆ ಇರುವುದರಿಂದ ಈಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಸಂಶಯ ಇದೆ ಎಂದು ಈಕೆಯ ತಂದೆ ಶ್ರೀಧರ್ ಕುಂಬಾರ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.








