ಬೆಂಗಳೂರು: ಅಕ್ಟೋಬರ್ 27:ಪಡಿತರ ಚೀಟಿದಾರರಿಗೆ ಪೌಷ್ಟಿಕ ಆಹಾರ ಒದಗಿಸುವ ಸಲುವಾಗಿ ರಾಜ್ಯ ಸರ್ಕಾರ ಅಕ್ಕಿ ಬದಲಿಗೆ ಪಡಿತರ ಕಿಟ್ ನೀಡಲಿದೆ ಎಂದು ಆಹಾರ, ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.
ಮೈಸೂರಿನಲ್ಲಿ ಮಾತನಾಡಿದ ಸಚಿವ ಕೆ.ಹೆಚ್.ಮುನಿಯಪ್ಪ ಅವರು, ಅನ್ನಭಾಗ್ಯ ಯೋಜನೆಯಡಿ ಅರ್ಹ ಪ್ರತಿ ಫಲಾನುಭವಿಗೆ 10 ಕೆ.ಜಿ ಅಕ್ಕಿ ವಿತರಣೆ ಮಾಡುತ್ತಿದ್ದು, ಮುಂದಿನ ತಿಂಗಳಲ್ಲಿ ಆಹಾರ ಧಾನ್ಯಗಳನ್ನು ಒಳಗೊಂಡ ಇಂದಿರಾ ಕಿಟ್ ವಿತರಿಸಲು ಕ್ರಮ ವಹಿಸಲಾಗುತ್ತಿದೆ. ರಾಜ್ಯದಲ್ಲಿ 4.5 ಕೋಟಿ ಜನ ಪಡಿತರ ಫಲಾನುಭವಿಗಳಿದ್ದಾರೆ ಎಂದರು. ಇಲಾಖೆಯಿಂದ ಪಡಿತರ ಕಾರ್ಡ್‌ಗಳ ಪರಿಷ್ಕರಣೆ ನಡೆಯುತ್ತಿದ್ದು ಅರ್ಹರು ತಾಲೂಕಿನಲ್ಲಿ ತಹಶೀಲ್ದಾರರನ್ನು ಭೇಟಿ ಮಾಡಿ ಮನವಿ ಸಲ್ಲಿಸಬಹುದು ಎಂದರು.
ಸಚಿವ ಡಾ. ಎಚ್.ಸಿ. ಮಹದೇವಪ್ಪ ಮಾತನಾಡಿ, ಆಹಾರ ಸಚಿವರಾಗಿ ಮುನಿಯಪ್ಪ ಅವರು 10 ಕೆ.ಜಿ. ಉಚಿತ ಅಕ್ಕಿ ನೀಡುವ ಯೋಜನೆ ತಂದರು. ಈಗ 5 ಕೆ.ಜಿ. ಅಕ್ಕಿ ಹಾಗೂ ಉಳಿದ 5 ಕೆ.ಜಿ.ಗೆ ಇಂದಿರಾ ಕಿಟ್ ಮೂಲಕ ಬೇಳೆ, ಎಣ್ಣೆ ಅಂತಹ ಆಹಾರಧಾನ್ಯ ನೀಡಲು ಚಿಂತಿಸಲಾಗಿದೆ ಎಂದರು.








