ಮಂಗಳೂರು, ಮಾ. 17 : ಹೊರ್ಮುಜ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿ, ಪ್ರಸ್ತುತ ಗುಜರಾತ್‌ನ ಮುಂದ್ರಾ ಬಂದರಿಗೆ ತಲುಪಿರುವ ಎಲ್‌ಪಿಜಿ ಸಾಗಣೆ ನೌಕೆ ‘ಶಿವಾಲಿಕ್’ ಮುಂದಿನ ಹಂತದಲ್ಲಿ ನವಮಂಗಳೂರು ಬಂದರಿಗೆ ಆಗಮಿಸುವ ಸಾಧ್ಯತೆ ಇದೆ.
ಒಟ್ಟು ಸುಮಾರು 46 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತೊಯ್ಯುತ್ತಿರುವ ಈ ನೌಕೆಯಿಂದ ಸುಮಾರು 20 ಸಾವಿರ ಮೆಟ್ರಿಕ್ ಟನ್ ಮುಂದ್ರಾ ಬಂದರಿನಲ್ಲಿ ಇಳಿಸಲಾಗಲಿದ್ದು, ಉಳಿದ 26 ಸಾವಿರ ಮೆಟ್ರಿಕ್ ಟನ್ ಮಂಗಳೂರಿನಲ್ಲಿ ಇಳಿಸುವ ನಿರೀಕ್ಷೆ ಇದೆ. ಈ ಎಲ್‌ಪಿಜಿಯನ್ನು ಇಂಡಿಯನ್ ಆಯಿಲ್ ಕಾರ್ಪೊರೇಶನ್ (IOC) ಆಮದು ಮಾಡಿಕೊಂಡಿದೆ ಎಂದು ತಿಳಿದುಬಂದಿದೆ.
ಕತಾರ್‌ನ ರಾಸ್ ಲಫಾನ್ ಬಂದರಿನಿಂದ ಎಲ್‌ಪಿಜಿ ತುಂಬಿಕೊಂಡು ಮಾರ್ಚ್ ಮೊದಲ ವಾರದಲ್ಲಿ ಹೊರಟಿದ್ದ ‘ಶಿವಾಲಿಕ್’ ಹಾಗೂ ‘ನಂದಾದೇವಿ’ ಎಂಬ ಎಲ್‌ಪಿಜಿ ಸಾಗಣೆ ಹಡಗುಗಳು ಮಧ್ಯಪ್ರಾಚ್ಯದ ಉದ್ವಿಗ್ನ ಯುದ್ಧ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಹೊರ್ಮುಜ್ ಜಲಸಂಧಿ ದಾಟಲು ಸಾಧ್ಯವಾಗದೆ ತಾತ್ಕಾಲಿಕವಾಗಿ ನಿಂತಿದ್ದವು.
ಆದರೆ ಇರಾನ್ ಸರ್ಕಾರ ಭಾರತೀಯ ಹಡಗುಗಳಿಗೆ ಹೊರ್ಮುಜ್ ಜಲಸಂಧಿ ದಾಟಲು ಅನುಮತಿ ನೀಡಿದ ಬಳಿಕ, ಈ ಎರಡೂ ಹಡಗುಗಳು ಮತ್ತೆ ಪ್ರಯಾಣ ಮುಂದುವರಿಸಿ ಭಾರತ ತಲುಪಿರುವುದಾಗಿ ತಿಳಿದುಬಂದಿದೆ.







