ಕುಂದಾಪುರ :ಅಕ್ಟೋಬರ್ 15 : ಕುಂದಾಪುರ ತಾಲೂಕಿನ ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕ್ರೇನ್ ಹರಿದು ಯುವಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಇಂದು ಸಂಭವಿಸಿದೆ.
ಮೃತ ಯುವಕ ತೆಕ್ಕಟ್ಟೆ ಗ್ರಾಮದ ಅಭಿಷೇಕ್ ಪೂಜಾರಿ ಎಂದು ತಿಳಿದು ಬಂದಿದೆ.
ಹೆದ್ದಾರಿಯಲ್ಲಿ ಯೂಟರ್ನ್ ತೆಗೆದುಕೊಳ್ಳುವ ಸ್ಥಳದಲ್ಲಿ ಖಾಸಗಿ ಬಸ್ ಪ್ರಯಾಣಿಕರನ್ನ ಹತ್ತಿಸಿ ಇಳಿಸುತ್ತಿತ್ತು. ಈ ವೇಳೆ ಬಸ್ ಪಕ್ಕದಲ್ಲಿ ದ್ವಿಚಕ್ರ ಸವಾರ ತಿರುವು ತೆಗೆದುಕೊಳ್ಳಲು ಮುಂದಾಗಿದ್ದಾನೆ. ಆಗ ಏಕಾಏಕಿ ಬಸ್ ಚಲಿಸಿದ ಪರಿಣಾಮ ಆಯತಪ್ಪಿ ದ್ವಿಚಕ್ರ ಸವಾರ ರಸ್ತೆಗೆ ಬಿದ್ದಿದ್ದಾನೆ. ಸವಾರ ಬೀಳುತ್ತಿದ್ದಂತೆ ಆತನ ಮೇಲೆ ಕ್ರೇನ್ ಹರಿದಿದೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಯುವಕ ಕೊನೆಯುಸಿರೆಳೆದಿದ್ದಾನೆ.
ದ್ವಿಚಕ್ರ ವಾಹನ ಸವಾರ ಬಿದ್ದಿರುವುದು ಗೋಚರವಾಗದೆ ಆತನ ಮೇಲೆ ಕ್ರೇನ್ ಚಲಿಸಿದೆ. ಖಾಸಗಿ ಬಸ್ ಚಾಲಕನ ನಿರ್ಲಕ್ಷ್ಯಕ್ಕೆ ಯುವಕ ದಾರುಣವಾಗಿ ಮೃತಪಟ್ಟಿದ್ದಾನೆ. ಖಾಸಗಿ ಬಸ್ ಚಾಲಕನ ವಿರುದ್ದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಅಪಘಾತದ ಸಿಸಿಟಿವಿ ದೃಶ್ಯ ವೈರಲ್ ಆಗಿದೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಈ ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾರೆ.
ಮಣೂರಿನ ಕಂಬಳಗದ್ದೆಬೆಟ್ಟು ನಿವಾಸಿ ಗೋಪಾಲ ಪೂಜಾರಿ ಹಾಗೂ ವನಜಾ ದಂಪತಿಯ ಮೂವರು ಮಕ್ಕಳಲ್ಲಿ 2ನೇಯವರಾದ ಅಭಿಷೇಕ್ ಕೋಟೇಶ್ವರದ ಅಂಶು ಮೆಡಿಕಲ್‌ನಲ್ಲಿ ಉದ್ಯೋಗಿಯಾಗಿದ್ದರು. ಸರಳತೆ ಸ್ವಭಾವದಿಂದ ಪರಿಸರದವರಿಗೆ ಬಹಳ ಅಚ್ಚುಮೆಚ್ಚಿನವನಾಗಿದ್ದ ಅವರು ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದರು. ಮೃತರು ಹೆತ್ತವರು, ಸಹೋದರ ಮತ್ತು ಸಹೋದರಿಯನ್ನು ಅಗಲಿದ್ದಾರೆ.








