ಉಡುಪಿ:ಸೆಪ್ಟೆಂಬರ್ 16 : ಶ್ರೀ ಕೃಷ್ಣನೂರು ಉಡುಪಿ ಯಲ್ಲಿ ವಿಟ್ಲಪಿಂಡಿ ಉತ್ಸವವು ಸೋಮವಾರ ಭಕ್ತ ಜನಸಾಗರದ ಮಧ್ಯೆ ವೈಭವದಿಂದ ಸಂಪನ್ನಗೊಂಡಿತು.
ಉತ್ಸವಕ್ಕೆಂದು ವಿಶೇಷವಾಗಿ ತಯಾರಿಸಲಾದ ಮೃಣ್ಮಯ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ತಂದು ಚಿನ್ನದ ರಥದಲ್ಲಿರಿಸಿ ರಥಬೀದಿಯ ಸುತ್ತ ಮೆರವಣಿಗೆ ನಡೆಸಲಾಯಿತು. ಇನ್ನೊಂದು ರಥದಲ್ಲಿ ಅನಂತೇಶ್ವರ ಹಾಗೂ ಚಂದ್ರಮೌಳೀಶ್ವರ ಉತ್ಸವ ಮೂರ್ತಿನ್ನಿರಿಸಿ ಮೆರವಣಿಗೆ ನಡೆಸಲಾಯಿತು.
ಅದಮಾರು ಮಠದ ಹಿರಿಯ ಯತಿ ವಿಶ್ವಪ್ರಿಯತೀರ್ಥ ಶ್ರೀಪಾದರು, ಪರ್ಯಾಯ ಪುತ್ತಿಗೆ ಮಠದ ಕಿರಿಯ ಯತಿ ಸುಶೀಂಧ್ರತೀರ್ಥ ಶ್ರೀಪಾದರು, ಪುತ್ತಿಗೆ ಮಠದ ದಿವಾನರಾದ ನಾಗರಾಜ ಆಚಾರ್ಯ, ಮಠದ ಅಂತರರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಹಾಗೂ ವಿವಿಧ ಗಣ್ಯರು ಉತ್ಸವದಲ್ಲಿ ಭಾಗವಹಿಸಿದ್ದರು.
ವಿಟ್ಲಪಿಂಡಿಯ ಉತ್ಸವ ಭಕ್ತರ ಉತ್ಸಾಹವನ್ನು ಇಮ್ಮಡಿಗೊಳಿಸಿತು. ಹುಲಿವೇಷಧಾರಿಗಳು ಹಾಗೂ ಅನೇಕ ಕಲಾತಂಡ, ತಮ್ಮ ಪ್ರದರ್ಶನ ತೋರಿ ವಿಟ್ಲಪಿಂಡಿ ಉತ್ಸವಕ್ಕೆ ಇನ್ನಷ್ಟು ಮೆರುಗು ತಂದರು.
ಮಡಿಕೆ ಓಡೆದು ಸಂಭ್ರಮಿಸಿದ ಗೊಲ್ಲ ವೇಷಧಾರಿಗಳು ಶ್ರೀ ಕೃಷ್ಣ ಮಠದ ಎದುರು ಹಾಗೂ ರಥಬೀದಿಯಲ್ಲಿ ನಿರ್ಮಿಸಲಾದ ಗುರ್ಜಿಗಳಲ್ಲಿ ಮೊಸರು ತುಂಬಿದ ಮಡಿಕೆಗಳನ್ನು ನೇತುಹಾಕಲಾಗಿತ್ತು. ಅದನ್ನು ಗೊಲ್ಲ ವೇಷಧಾರಿಗಳು ಒಡೆದು ವಿಟ್ಲಪಿಂಡಿಯನ್ನು ಸಂಭ್ರಮದಿಂದ ಆಚರಿಸಿದರು.
ಶ್ರೀ ಕೃಷ್ಣಜನ್ಮಾಷ್ಟಮಿ, ವಿಟ್ಲಪಿಂಡಿ ಹಬ್ಬಕ್ಕೆಂದು ಭಕ್ತರಿಗಾಗಿ ತಯಾರಿಸಲಾದ ಉಂಡೆ, ಚಕ್ಕುಲಿಯನ್ನು ಶ್ರೀ ಕೃಷ್ಣನಿಗೆ ನೈವೇದ್ಯ ಮಾಡಲಾಯಿತು. ಆ ಬಳಿಕ ರಥಬೀದಿಯಲ್ಲಿ ನಡೆಯುವ ವಿಟ್ಲಪಿಂಡಿಯ ಹಬ್ಬದಲ್ಲಿ ಪಾಲ್ಗೊಂಡ ಅನೇಕ ಭಕ್ತರಿಗೆ, ಶ್ರೀ ಕೃಷ್ಣ ಮಠಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಉಂಡೆ, ಚಕ್ಕುಲಿಯ ಪ್ರಸಾದವನ್ನು ವಿತರಿಸಿದರು.
ಕೃಷ್ಣನ ಮೃಣ್ಮಯ ಮೂರ್ತಿ ಮಧ್ವಸರೋವರದಲ್ಲಿ ಜಲಸ್ಥಂಭನ : ಕೃಷ್ಣನ ಮೃಣ್ಮಯ(ಮಣ್ಣಿನ) ಮೂರ್ತಿ ನವರತ್ನದಲ್ಲಿರಿಸಿ ರಥಬೀದಿಯಲ್ಲಿ ಒಂದು ಸುತ್ತು ರಥೋತ್ಸವ ನಡೆಸಿ, ಬಳಿಕ ಮಧ್ವಸರೋವರದಲ್ಲಿ ಜಲಸ್ಥಂಭನ ಮಾಡುವ ಮೂಲಕ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿಯು ಸಮಾಪನಗೊಂಡಿತು.

ಕಳೆದ ಹಲವಾರು ದಿನಗಳಿಂದ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ನಡೆಯುತ್ತಿದ್ದ ಶ್ರೀ ಕೃಷ್ಣಜನ್ಮಾಷ್ಟಮಿ, ವಿಟ್ಲಪಿಂಡಿಯ ಹಬ್ಬಕ್ಕೆ ತೆರೆಬಿದ್ದಿತು. ಅನೇಕ ಸಾಂಸ್ಕೃತಿಕ ಕಾರ್ಯಕ್ರಮ, ಸ್ಪರ್ಧಾ ಕಾರ್ಯಕ್ರಮ ಮೂಲಕ ಕಣ್ಮನ ಸೆಳೆದ ಶ್ರೀ ಕೃಷ್ಣಾಷ್ಟಮಿಯಲ್ಲಿ ಹಲವಾರು ಭಕ್ತರು ಪಾಲ್ಗೊಂಡು ಅಷ್ಟಮಿ ವಿಟ್ಲಪಿಂಡಿಯ ಹಬ್ಬದ ವೈಭವವನ್ನು ಕಣ್ತುಂಬಿಕೊಂಡರು.








