ಉಡುಪಿ: ಆಗಸ್ಟ್ 30 : ನಗರ ಸಭೆ ಸತ್ಯಮೂರ್ತಿ ಸ್ಮಾರಕ ಸಭಾಭವನದಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಅಂಗಡಿ, ಹೊಟೇಲ್, ಮಳಿಗೆಗಳ ವ್ಯಾಪಾರ ವಹಿವಾಟಿಗೆ ರಾತ್ರಿ 11 ಗಂಟೆ ವರೆಗೆ ಅವಕಾಶ, ಮಳೆಯಿಂದ ಹದಗೆಟ್ಟಿರುವ ರಸ್ತೆಗಳ ನಿರ್ವಹಣೆ, ಇ ಖಾತಾ ವಿತರಣೆ, ಮಲ್ಪೆ ಬೀಚ್ ಸ್ವಚ್ಛತೆ, ದಾರಿದೀಪ, ರಾಷ್ಟೀಯ ಹೆದ್ದಾರಿ ಪರ್ಕಳ ಹಾಗೂ ಇಂದ್ರಾಳಿ ಸೇತುವೆ ಕಾಮಗಾರಿ ಮೊದಲಾದ ವಿಷಯಗಳ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಲಾಯಿತು
ನಗರಸಭೆಯ ಅಧ್ಯಕ್ಷ ಪ್ರಭಾಕರ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ಯಶ್‌ಪಾಲ್ ಸುವರ್ಣ, ಕಾನೂನು ಸುವ್ಯವಸ್ಥೆಯ ನೆಪವೊಡ್ಡಿ ಪ್ರಸ್ತುತ ಉಡುಪಿ, ಮಣಿಪಾಲದಲ್ಲಿ ರಾತ್ರಿ ೧೦ಗಂಟೆಗೆ ಅಂಗಡಿ, ಹೊಟೇಲ್‌ಗಳನ್ನು ಬಂದ್ ಮಾಡಲಾಗುತ್ತಿದೆ. ಇದರಿಂದ ಜಿಲ್ಲೆಯ ಆರ್ಥಿಕತೆಗೆ ಪೆಟ್ಟು ಬೀಳುತ್ತಿದೆ. ಅದೇ ರೀತಿ ಪ್ರವಾಸಿಗರು, ರೋಗಿಯ ಸಂಬಂಧಿಕರು, ವಿದಾರ್ಥಿಗಳಿಗೆ ರಾತ್ರಿ ಊಟ ಹಾಗೂ ವಸ್ತುಗಳನ್ನು ಕೊಂಡುಕೊಳ್ಳಲು ತುಂಬಾ ತೊಂದರೆ ಆಗುತ್ತಿದೆ ಎಂದರು. ಆದುದರಿಂದ ಜಿಲ್ಲೆಯ ಆರ್ಥಿಕ ಹಿತದೃಷ್ಠಿಯಿಂದ ಹಾಗೂ ಜನಸಾಮಾನ್ಯರಿಗೆ ಅನುಕೂಲವಾಗುವ ರೀತಿಯಲ್ಲಿ ಉಡುಪಿ ಹಾಗೂ ಮಣಿಪಾಲದಲ್ಲಿ ರಾತ್ರಿ ೧೧ಗಂಟೆಯವರೆಗೆ ಅಂಗಡಿ, ಹೊಟೇಲ್‌ಗಳನ್ನು ತೆರೆದಿಡುವಂತೆ ನಿರ್ಣಯ ಮಾಡಬೇಕು ಮತ್ತು ಅದನ್ನು ಜಿಲ್ಲಾಧಿಕಾರಿಗೆ ಸಲ್ಲಿಕೆ ಮಾಡಬೇಕು ಎಂದು ಶಾಸಕರು ಸಬೆಯಲ್ಲಿ ತಿಳಿಸಿದರು. ಅದಕ್ಕೆ ಎಲ್ಲ ಸದಸ್ಯರು ಒಪ್ಪಿಗೆ ಸೂಚಿಸಿದರು.
ಸಭೆಯ ಅಧ್ಯಕ್ಷತೆಯನ್ನು ಉಡುಪಿ ನಗರಸಭೆ ಅಧ್ಯಕ್ಷರಾದ ಶ್ರೀ ಪ್ರಭಾಕರ ಪೂಜಾರಿ ವಹಿಸಿದ್ದರು. ಉಪಾಧ್ಯಕ್ಷರಾದ ಶ್ರೀಮತಿ ರಜನಿ ಹೆಬ್ಬಾರ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶ್ರೀ ದುರ್ಗಾ ಪ್ರಸಾದ್ ಹಾಗೂ ನಗರಸಭೆಯ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.








