ಹಾಸನ, ಆಗಸ್ಟ್ 18: ಹಾಸನ ಜಿಲ್ಲೆಯ ಶಿರಾಡಿಘಾಟ್ ಭಾಗದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ಕಡೆ ಗುಡ್ಡ ಕುಸಿಯುತ್ತಿದೆ.
ಅವೈಜ್ಞಾನಿಕ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಯಿಂದ ಗುಡ್ಡ ಕುಸಿಯುತ್ತಿದೆ ಎಂದು ಹೇಳಲಾಗುತ್ತಿದೆ. ಸಕಲೇಶಪುರ ತಾಲೂಕಿನ ಕಪ್ಪಳ್ಳಿ ಬಳಿ ರಸ್ತೆಗೆ ಅಪಾರ ಪ್ರಮಾಣದ ಮಣ್ಣು ಮತ್ತು ಬೃಹತ್ ಬಂಡೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ನೂರಾರು ಅಡಿ ಎತ್ತರದ ಗುಡ್ಡ ಕಡಿದು ರಸ್ತೆ ನಿರ್ಮಾಣ ಮಾಡಲಾಗಿದೆ. ಆದರೆ, ರಸ್ತೆಯ ಬದಿಯಲ್ಲಿ ಚರಂಡಿ ನಿರ್ಮಿಸದೆ ಮಳೆಗೆ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಯಾವಾಗ ಎಲ್ಲಿ ಗುಡ್ಡ ಕುಸಿದು ಬೀಳುತ್ತೋ ಎಂಬ ಆತಂಕದಲ್ಲಿ ವಾಹನ ಸವಾರರು ಇದ್ದಾರೆ.
ಶಿರಾಡಿಘಾಟ್ನ ರಾಷ್ಟ್ರೀಯ ಹೆದ್ದಾರಿ 75 ಸುರಕ್ಷತೆಗೆ ಸಕಲೇಶಪುರ ತಾಲೂಕಿನ ದೋಣಿಗಲ್ ಬಳಿ ಕಟ್ಟಿದ್ದ ತಡೆಗೋಡೆ ಕುಸಿತಗೊಂಡಿದೆ. ಜುಲೈನಲ್ಲಿ ಮಳೆಗೆ ಸ್ವಲ್ಪ ಪ್ರಮಾಣದಲ್ಲಿ ತಡೆಗೋಡೆ ಕುಸಿತವಾಗಿತ್ತು. ಇದೀಗ 100 ಮೀಟರ್ ತನಕ ತಡೆಗೋಡೆ ಕುಸಿದಿದೆ. ಮತ್ತೆ ಮಳೆ ಹೆಚ್ಚಾದರೆ ರಸ್ತೆಯೇ ಕುಸಿದು ಬೀಳುವ ಆತಂಕವಿದೆ.








