ಉಡುಪಿ, ಆಗಸ್ಟ್ 16: ಇಂದು ಅಷ್ಟಮಿ ಸಂಭ್ರಮ. ಆದರೆ ಪೋಡವಿಗೋಡೆಯ ನಾಡು ಉಡುಪಿಯಲ್ಲಿ ಅಷ್ಟಮಿ ಸಂಭ್ರಮ ಕಾಣಬೇಕಾದರೆ ಭಕ್ತರು ಇನ್ನೂ ಒಂದು ತಿಂಗಳು ಕಾಯಬೇಕಾಗಿದೆ.
ಹೌದು ಈ ಬಾರಿ ಉಡುಪಿಯಲ್ಲಿ ಪ್ರತ್ಯೇಕವಾಗಿ ಅಷ್ಟಮಿ ಆಚರಣೆ ನಡೆಯಲಿದೆ. ನಾಡಿನಲ್ಲೆಡೆ ಚಾಂದ್ರಮಾನ ಪದ್ಧತಿಯಂತೆ ಅಷ್ಟಮಿ ಹಬ್ಬವನ್ನು ಆಚರಿಸಿದರೆ, ಉಡುಪಿಯಲ್ಲಿ ಸೌರಮಾನ ಪದ್ಧತಿಯನ್ನು ಅನುಸರಿಸಲಾಗುತ್ತದೆ.
ಹುಣ್ಣಿಮೆ- ಅಮಾವಾಸ್ಯೆಯ ಗಣನೆಯಲ್ಲಿ ಇತರ ಭಾಗದಲ್ಲಿ ಆಚರಣೆ ನಡೆದರೆ, ತುಳುನಾಡ ಕರಾವಳಿಯಲ್ಲಿ ಸಂಕ್ರಮಣ ವಿಶೇಷ. ಹಾಗಾಗಿ ಈ ಬಾರಿ ಅಷ್ಟಮಿ ತಿಥಿಯ ಜೊತೆ ರೋಹಿಣಿ ನಕ್ಷತ್ರ ಸನ್ನಿಹಿತವಾಗಿರುವ, ಸೆಪ್ಟೆಂಬರ್ 14ರಂದು ಅಷ್ಟಮಿ ಆಚರಿಸಲಾಗುತ್ತಿದೆ. ಇದನ್ನು ಶ್ರೀಕೃಷ್ಣ ಜಯಂತಿ ಎಂದು ಕರೆಯಲಾಗುತ್ತದೆ. ಹಾಗಾಗಿಯೇ ಕೃಷ್ಣ ಊರಿನಲ್ಲಿ ಇಂದು ಅಷ್ಟಮಿಯ ಸಂಭ್ರಮವಿಲ್ಲ.
ಆದರೆ ಸೆಪ್ಟೆಂಬರ್ ತಿಂಗಳಿನಲ್ಲಿ ಅಷ್ಟಮಿ, ಮುದ್ದುಕೃಷ್ಣ ಹಾಗೂ ಮೊಸರು ಕುಡಿಕೆ ಸಂಭ್ರಮ, ಕೃಷ್ಣ ಉತ್ಸವ ಎಲ್ಲವೂ ನಡೆಯಲಿದೆ
ಇಂದು ಚಂದ್ರಮಾನ ಪದ್ಧತಿಯಂತೆ ಹಬ್ಬ ಆಚರಿಸುವವರಿಗೆ ಕೃಷ್ಣ ಮಠ ಅವಕಾಶ ಕಲ್ಪಿಸಿದ್ದು ಸಾಂಕೇತಿಕವಾಗಿ ಇಂದು ಕೂಡ ಅರ್ಗ್ಯ ಪ್ರಧಾನ ಅವಕಾಶ ಇದೆ.








