ಮಣಿಪಾಲ, ಜು.05: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಸಂಸ್ಥೆಯ ಭಾಗವಾದ ಮಣಿಪಾಲ ಕಾಲೇಜ್ ಆಫ್ ನರ್ಸಿಂಗ್ (ಎಂ ಸಿ ಒ ಎನ್), ಕೆನಡಾದ ಯೂನಿವರ್ಸಿಟಿ ಆಫ್ ನ್ಯೂ ಬ್ರನ್ಸ್ವಿಕ್ (ಯು ಎನ್ ಬಿ) ಸಹಯೋಗದಲ್ಲಿ “ಆರೋಗ್ಯದಲ್ಲಿ ಸಮಾನತೆ, ವೈವಿಧ್ಯತೆ ಮತ್ತು ಒಳಗೊಳ್ಳುವಿಕೆ (ಇಡಿಐ) ಕುರಿತಾಗಿ ಅಂತರಾಷ್ಟ್ರೀಯ ಸಮ್ಮೇಳನ ಕಾರ್ಯಕ್ರಮ ಶಿಕ್ಷಣ ಸಂಶೋಧನೆ ಮತ್ತು ಆಚರಣೆಗಾಗಿ ಜಾಗತಿಕ ಸಹಯೋಗದ ಭವಿಷ್ಯವನ್ನು ಕಲ್ಪಿಸುವುದು ಎಂಬ ಸಂಕಲ್ಪದೊಂದಿಗೆ ಜುಲೈ 7ರಿಂದ 9ರ ವರೆಗೆ ಮಣಿಪಾಲ ಕೆಎಂಸಿಯ ಡಾ. ಟಿ ಎಂ ಎ ಫೈ ಅಡಿಟೋರಿಯಂ ನಲ್ಲಿ ನಡೆಯಲಿದೆ.
ಅಂತರ್ಗತ ಆರೋಗ್ಯ ಸೇವೆಗಳ ಅಭ್ಯಾಸಗಳನ್ನು ಉತ್ತೇಜಿಸಲು ಜಾಗತಿಕ ನಾಯಕರು, ಶೈಕ್ಷಣಿಕ ತಜ್ಞರು, ಸಂಶೋಧಕರು, ನೀತಿ ನಿರ್ಣಯಿಸುವವರು ಮತ್ತು ಆರೋಗ್ಯ ವೃತ್ತಿಪರರನ್ನು ಒಟ್ಟುಗೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಈ ಕಾರ್ಯಕ್ರಮ ಏಳು ಪೂರ್ಣ ಆದಿವೇಶನ, ವೈಜ್ಞಾನಿಕ ಲೇಖನ/ ಪೋಸ್ಟರ್ ಪ್ರದರ್ಶನಗಳು ಮತ್ತು ಮಿಶ್ರ ವಿಧಾನಗಳ ಸಂಶೋಧನೆ ಕುರಿತು ಪೂರ್ವ ಸಮ್ಮೇಳನ ಕಾರ್ಯಗಾರ ಮೊದಲಾದ ವೈಶಿಷ್ಟ್ಯತೆಗಳನ್ನು ಹೊಂದಿರುತ್ತದೆ.
ಪ್ರಮುಖ ಮಾತುಗಾರರಾಗಿ ಡಾ. ಅನೀಸ್ ಜಾರ್ಜ್, ಡಾ. ಮೇರಿ ಲಿನಾ ಎಕ್ಸಲೆಂಟ್ (ಅಮೆರಿಕ), ಡಾ. ಮಾರ್ತಾ ಪೈನ್ಟರ್ (ಕೆನಡಾ), ಡಾ. ವೀಣಾ ವಾಸ್ವಾನಿ, ಡಾ. ಚೇರಿಯನ್ ವರ್ಗೀಸ್ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ .
ಸಾಂಸ್ಕೃತಿಕ ವಿನಮ್ರತೆ, ಆರೋಗ್ಯ ಸಮಾನತೆಯಿಂದ ಹಿಡಿದು ಮಾರ್ಜಿನಲೈಸ್ಡ್ ಸಮುದಾಯಗಳ ಶಕ್ತೀಕರಣ, ಮತ್ತು ಅಂತಾರಾಷ್ಟ್ರೀಯ ಆರೋಗ್ಯ ನವೋದ್ಯಮಗಳವರೆಗೆ ಅಧಿವೇಶನದ ವಿಷಯ ವ್ಯಾಪಕತೆ ಇರುತ್ತದೆ.
ಜುಲೈ 8ರಂದು ನಡೆಯುವ ಉದ್ಘಾಟನಾ ಸಮಾರಂಭಕ್ಕೆ ಮಾಹೆ ಯ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ. ವೆಂಕಟೇಶ್ ಅವರು ಹಾಗೂ ವಿವಿಧ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಗಣ್ಯರು ಉಪಸ್ಥಿತರಿರಲಿದ್ದಾರೆ.
ಈ ಸಮ್ಮೇಳನವು ದಿ. ಡಾ. ಅಪರ್ಣಾ ಭದೂರಿ ಮತ್ತು ದಿ. ಪ್ರೊಫೆಸರ್ ಪಿ.ಪಿ. ಭಾನುಮತಿ ಅವರ ಸ್ಮರಣಾರ್ಥವಾಗಿ ವಿಶೇಷ ಉಪನ್ಯಾಸಗಳನ್ನು ಆಯೋಜಿಸಿದ್ದು, ಈ ಕೆಳಗಿನ ಉದ್ದೇಶಗಳನ್ನು ಹೊಂದಿದೆ:
ಆರೋಗ್ಯ ಶಿಕ್ಷಣ ಮತ್ತು ಸೇವೆಯಲ್ಲಿ ಸಮಾನತೆ, ವೈವಿಧ್ಯತೆ ಮತ್ತು ಒಳಗೊಳ್ಳುವಿಕೆಯನ್ನು ಉತ್ತೇಜಿಸುವುದು.
ಅಂತಾರಾಷ್ಟ್ರೀಯ ಶೈಕ್ಷಣಿಕ ಸಹಕಾರಕ್ಕೆ ವೇದಿಕೆ ಒದಗಿಸುವುದು.
ನವೀನ ನೀತಿ ರೂಪಣೆಗಳ ಮೂಲಕ ಆರೋಗ್ಯ ಅಂತರಗಳನ್ನು ದೂರ ಮಾಡುವುದು.
ಪ್ರಾರಂಭಿಕ ಹಂತದ ವೃತ್ತಿಪರರು ಮತ್ತು ಸಂಶೋಧಕರನ್ನು ತೊಡಗಿಸಿಕೊಳ್ಳುವುದು.
ಹೆಚ್ಚಿನ ವಿವರಗಳಿಗೆ ಭೇಟಿ ನೀಡಿ: https://conference.manipal.edu/MICEDI2025/
ಅತ್ಯುತ್ತಮ ಹಾಗೂ ಅರ್ಥಪೂರ್ಣ ಸಂವಾದ ಮತ್ತು ಕ್ರಿಯೆಯ ಮೂಲಕ ಈ ಮಹತ್ವದ ಸಮ್ಮೇಳನವು ಜಾಗತಿಕ ಆರೋಗ್ಯ ವ್ಯವಸ್ಥೆಗಳಲ್ಲಿ ಸಮಾನತೆ, ವೈವಿಧ್ಯತೆ ಮತ್ತು ಒಳಗೊಳ್ಳುವಿಕೆಯನ್ನು ಅಭಿವೃದ್ಧಿಪಡಿಸಲು ಒಂದು ಹೊಸ ದಾರಿಯ ಉಗಮಕ್ಕೆ ಕಾರಣವಾಗಲಿದೆ.