ಉಡುಪಿ: ಜೂನ್ 25:ಪ್ರಸ್ತುತ ಸ್ಥಗಿತಗೊಂಡಿರುವ ನರ್ಮ್ ಬಸ್ ಗಳನ್ನು ಪುನರಾರಂಭಿಸುವ ಜೊತೆಗೆ ಹಳೆಯ ಬಸ್ ಗಳನ್ನು ಬದಲಾಯಿಸಿ, ಹೆಚ್ಚುವರಿ ಬಸ್ ಗಳ ಸೇವೆಯನ್ನು ಒದಗಿಸುವಂತೆ ಬಿಜೆಪಿ ಉಡುಪಿ ನಗರ ಯುವ ಮೋರ್ಚಾ ವತಿಯಿಂದ ಮೋರ್ಚಾ ಅಧ್ಯಕ್ಷ ಶ್ರೀವತ್ಸ ನೇತೃತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಉಡುಪಿ ನಗರ ಭಾಗದ ಸಾರ್ವಜನಿಕರ ಓಡಾಟಕ್ಕೆ ಅನುಕೂಲವಾಗುವಂತೆ ಸುಮಾರು 9 ವರ್ಷಗಳ ಹಿಂದೆ ನರ್ಮ್ ಬಸ್ಸುಗಳು ಚಾಲನೆಗೊಂಡಿದ್ದು, ಈ ಬಸ್ಸುಗಳ ಓಡಾಟ ಸಾವರ್ಜನಿಕರ ಪ್ರಶಂಸೆಗೂ ಪಾತ್ರವಾಗಿತ್ತು. ಆದರೆ ಪ್ರಸ್ತುತ 13 ನರ್ಮ್ ಬಸ್ಸುಗಳ ಓಡಾಟವನ್ನು ಖಾಯಂ ಆಗಿ ಸ್ಥಗಿತಗೊಳಿಸಲಾಗಿದೆ. ಸದ್ರಿ ಸ್ಥಗಿತಗೊಳಿಸಲಾಗಿರುವ 13 ರೂಟ್ ಗಳ ಬಸ್ಸುಗಳ ಓಡಾಟವನ್ನು ಪುನರಾರಂಭಿಸುವುದು ತೀರಾ ಅಗತ್ಯವಾಗಿರುತ್ತದೆ. ಅಲ್ಲದೆ ಸದ್ರಿ 45 ಬಸ್ಸುಗಳ ಮಂಜೂರಾತಿಯು 10 ವರ್ಷಗಳ ಹಿಂದಿನ ಸಮೀಕ್ಷೆಯಂತೆ ಆಗಿರುತ್ತದೆ. ಹೊಸ ಸಂಪರ್ಕ ರಸ್ತೆಗಳ ಅಭಿವೃದ್ಧಿ ಮತ್ತು ಪ್ರಸ್ತುತ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಸದ್ರಿ ಬಸ್ಸುಗಳ ಸಂಖ್ಯೆಯನ್ನು ಕನಿಷ್ಠ 80 ನರ್ಮ್ ಬಸ್ಸುಗಳಿಗೆ ಹೆಚ್ಚಿಸಬೇಕೆಂದು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಉಡುಪಿ ನಗರದಲ್ಲಿ ಕಾರ್ಯ ನಿರ್ವಹಿಸುತ್ತಿರುವ 32 ನರ್ಮ್ ಬಸ್ಸುಗಳು ತೀರಾ ಹಳೆಯದಾಗಿದ್ದು, ಮಾರ್ಗ ಮಧ್ಯೆ ಕೆಟ್ಟು ನಿಲ್ಲುವ ಘಟನೆಗಳು ಸಂಭವಿಸುತ್ತಿವೆ. ಬಸ್ಸುಗಳ ಚಾಲಕರು ಮತ್ತು ನಿರ್ವಾಹಕರ ಕೊರತೆ ಇರುವುದರಿಂದ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡಬೇಕಾದ ಅನಿವಾರ್ಯತೆ ಇದೆ. ಸಮರ್ಪಕ ಬಸ್ ಸಂಚಾರ ವ್ಯವಸ್ಥೆ ಇಲ್ಲದೇ ವಿದ್ಯಾರ್ಥಿಗಳು, ಸಾರ್ವಜನಿಕರು, ಕಾರ್ಮಿಕರು ಮತ್ತು ವಯೋವೃದ್ಧರು ಕಾಲ್ನಡಿಗೆಯಲ್ಲೇ ಓಡಾಡುವ ದುಸ್ಥಿತಿ ಬಂದೊದಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಜಿಲ್ಲಾಧಿಕಾರಿಗಳಿಗೆ ಈ ಎಲ್ಲಾ ಜ್ವಲoತ ಸಮಸ್ಯೆಗಳನ್ನು ವಿವರಿಸಿ ಅತೀ ಶೀಘ್ರದಲ್ಲಿ ಸಮಸ್ಯೆಯನ್ನು ಪರಿಹರಿಸಲು ಆಗ್ರಹಿಸಲಾಗಿದೆ.
ನರ್ಮ್ ಬಸ್ಸು ಗಳ ಸೇವೆಯನ್ನು ಹೆಚ್ಚಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಕೈಗೆತ್ತಿಕೊಳ್ಳುವ ನಿರ್ಧಾರದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಉಡುಪಿ ನಗರ ಯುವ ಮೋರ್ಚಾ ಉಪಾಧ್ಯಕ್ಷರಾದ ಸಂದರ್ಶ್ ಆಚಾರ್ಯ, ಪ್ರಜ್ವಲ್ ಪೂಜಾರಿ, ಧನುಷ್ ಬಿ.ಕೆ,ಮ್., ಪ್ರಧಾನ ಕಾರ್ಯದರ್ಶಿಗಳಾದ ನಿತಿನ್ ಪೈ ಮಣಿಪಾಲ, ಶಿವಪ್ರಸಾದ್, ಕಾರ್ಯದರ್ಶಿಗಳಾದ ಧನುಷ್ ಕಡಿಯಾಳಿ, ಹರ್ಷರಾಜ್, ಆಕಾಂಶ್, ಭೂಷಣ್, ದೀಕ್ಷಿತ್ ಶೆಟ್ಟಿ, ರಮಿತ್ ಶೆಟ್ಟಿ, ತರುಣ್ ಉಪಸ್ಥಿತರಿದ್ದರು.