ಕುಂದಾಪುರ: ಜೂನ್ 17:ಹೆಮ್ಮಾಡಿ – ಕೊಲ್ಲೂರು ಮುಖ್ಯ ರಸ್ತೆಯ ಕೆಂಚನೂರು ಸಮೀಪದ ಮಲ್ಲಾರಿಯ ತಿರುವಿನಲ್ಲಿ ಖಾಸಗಿ ಬಸ್‌ಗೆ ಬೈಕ್ ಢಿಕ್ಕಿಯಾಗಿ ಸವಾರ ಸಿಗಂದೂರು ನಿವಾಸಿ ಶರತ್ (25) ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜೂನ್ 16 ಸೋಮವಾರ ಮಧ್ಯಾಹ್ನ ಸಂಭವಿಸಿದೆ.
ಬಸ್ ಹೆಮ್ಮಾಡಿಯಿಂದ ಕೊಲ್ಲೂರಿನ ಕಡೆಗೆ ಸಂಚರಿಸುತ್ತಿದ್ದು, ಈ ವೇಳೆ ವೇಗವಾಗಿ ಬಂದ ಬೈಕ್ ಬಸ್‌ಗೆ ಢಿಕ್ಕಿಯಾಗಿದೆ. ಸವಾರ ಶರತ್ ರಸ್ತೆಗೆ ಬಿದ್ದು ತಲೆ, ಎಡ ಕಾಲಿಗೆ ಗಂಭೀರ ಗಾಯವಾಗಿದೆ. ಕೂಡಲೇ ಅವರನ್ನು ಆ್ಯಂಬುಲೆನ್ಸ್ ಮೂಲಕ ಕುಂದಾಪುರದ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿ ವೈದ್ಯರು ಪರೀಕ್ಷಿಸಿ ಅದಾಗಲೇ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.
ಬಸ್‌ಗೆ ಢಿಕ್ಕಿ ಹೊಡೆದ ಬೈಕ್‌ನ ರೇಡಿಯೇಟರ್ ಮೇಲೆ ಪೆಟ್ರೋಲ್ ಬಿದ್ದ ಕಾರಣ ಬೆಂಕಿ ತಗಲಿ ಸುಟ್ಟು ಹೋಗಿದೆ. ಶಂಕರನಾರಾಯಣ ಠಾಣೆಯ ವೃತ್ತ ನಿರೀಕ್ಷಕ ಜಯರಾಮ ಡಿ. ಗೌಡ, ಕುಂದಾಪುರ ಸಂಚಾರ ಠಾಣೆ ಎಸ್‌ಐ ಪ್ರಸಾದ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.